ನಾಗಮಂಗಲ : ಮನೆಗೆ ನುಗ್ಗಿದ ನಾಲ್ವರು ದರೋಡೆಕೋರರು ಮಾಲೀಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಚಾಮಲಾಪುರ ಗೇಟ್‌ನಲ್ಲಿ ನಡೆದಿದೆ.
ತಾಲ್ಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಾಮಲಾಪುರ ಗೇಟ್‌ನ ನಿವಾಸಿ ಮಂಜುನಾಥ್ ಎಂಬುವರ ಮನೆಗೆ ಕಾರಿನಲ್ಲಿ ನಾಲ್ವರು ದರೋಡೆಕೋರರು ಬಂದು ಮನೆಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದಾರೆ.
ಮನೆಯ ಬಾಗಿಲು ಮುರಿದು ಮನೆಗೆ ನುಗ್ಗಿರುವ ಮೂವರು ದರೋಡೆಕೋರರು ಮಂಜುನಾಥ್ ಹಾಗೂ ಅವರ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದೋಚಿದ್ದಾರೆ.
ಮನೆಯ ಮತ್ತೊಂದು ಭಾಗದಲ್ಲಿ ಮಲಗಿದ್ದ ಮಂಜುನಾಥ್ ತಂದೆ ಹಾಗೂ ತಾಯಿಯ ಮೇಲೂ ಹಲ್ಲೆ ನಡೆಸಿದ್ದು, ಅವರ ಬಳಿ ಯಾವುದೇ ಆಭರಣವಿಲ್ಲದ್ದನ್ನು ಕಂಡು ಬಿಟ್ಟಿದ್ದಾರೆ. ರೂಂನಲ್ಲಿ ಮಲಗಿದ್ದ ಮಂಜುನಾಥ್ ಅವರ ಪುತ್ರಿಯ ಮೇಲೂ ಹಲ್ಲೆ ನಡೆಸಿದ್ದಾರೆ.
ತಮ್ಮ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಲು ಮುಂದಾಗಿದ್ದಕ್ಕೆ ಮೊಬೈಲ್ ಕಸಿದುಕೊಂಡು ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಆದರೆ, ದೂರವಾಣಿ ಕರೆ ಕಡಿತವಾಗಿಲ್ಲದ್ದರಿಂದ ಘಟನೆಯ ಬಗ್ಗೆ ಅರಿತ ಮಂಜುನಾಥ್ ಸ್ಥಳಕ್ಕೆ ಆಗಮಿಸಿದ್ದರಿಂದ ಸ್ಥಳದಿಂದ ದರೋಡೆಕೋರರು ಕಾಲ್ಕಿತ್ತಿದ್ದಾರೆ. ಗಾಯಾಳುಗಳು ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಬೆಳ್ಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.