ಮಂಡ್ಯ: ಕಾವೇರಿ ಆರತಿಗೆ ರೈತ ಸಂಘ ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ರೈತರ ಜೊತೆ ಚರ್ಚೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್ ಅಣೆಕಟ್ಟೆ ಬಳಿ ಕೈಗೊಳ್ಳಲಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಕಾವೇರಿ ಅರತಿ ಯೋಜನೆಗಳಿಗೆ ಏಕೆ ವಿರೋಧ ವ್ಯಕ್ತವಾಗುತ್ತಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ರೈತಸಂಘದ ಜೊತೆ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಸಮಸ್ಯೆಯನ್ನು ನಮಗೆ ಮನದಟ್ಟು ಮಾಡಿಕೊಡಲಿ. ನಿಜವಾಗಿಯೂ ಸಮಸ್ಯೆ ಇದ್ದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿ, ಈ ಯೋಜನೆ ನಿಲ್ಲಿಸುವ ತೀರ್ಮಾನ ಮಾಡೋಣ ಎಂದರು.
ಈ ಯೋಜನೆಗಳಿಂದ ಆರ್ಥಿಕತೆ ವೃದ್ಧಿ, ಉದ್ಯೋಗ ಸೃಷ್ಟಿ ಆಗುತ್ತದೆ. ಇದನ್ನು ರೈತಸಂಘದವರು ಅರ್ಥ ಮಾಡಿಕೊಳ್ಳಲಿ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಸಹ ರೈತರ ಪರವಾಗಿ ಬಂದು ಚರ್ಚೆ ಮಾಡಲಿ. ರೈತರಿಗೆ ಪ್ರತಿಭಟನೆ ನಡೆಸುವ ಹಕ್ಕಿದೆ. ಚರ್ಚೆ ಬಳಿಕವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.





