ನಾಗಮಂಗಲ : ತಾಲೂಕಿನ ಚುಂಚನಹಳ್ಳಿ ಗ್ರಾಮದ ಶ್ರೀಚಂದ್ರಶೇಖರನಾಥ ಬಡಾವಣೆ ಕಟ್ಟೆಯಲ್ಲಿ ಅಜ್ಜಿ ಮತ್ತು ಮೊಮ್ಮಗಳನ್ನು ಕೊಲೆ ಮಾಡಿ, ಶವಗಳನ್ನು ಮೂಟೆಗಳಲ್ಲಿ ಕಟ್ಟಿ ಬಿಸಾಡಿರುವ ಘಟನೆ ಬೆಳಕಿಗೆ ಬೆಳಕಿಗೆ ಬಂದಿದೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಲ್ಕೆರೆ ಗ್ರಾಮದ ನಿವಾಸಿಗಳಾದ ಜಯಮ್ಮ(೪೫), ಈಕೆಯ ಮೊಮ್ಮಗಳು ಎರಡೂವರೆ ವರ್ಷ ರಿಷಿಕಾ ಕೊಲೆಯಾದವರು. ಅಲೆಮಾರಿಯ ಜೀವನ ನಡೆಸುತ್ತಿದ್ದ ಇವರು ವಾರದ ಹಿಂದೆ ಈ ಚುಂಚನಹಳ್ಳಿ ಪಾಳ್ಯದಲ್ಲಿ ವಾಸವಿದ್ದ ಗುಬ್ಬಿ ತಾಲೂಕಿನ ಸಿ.ಎಸ್.ಪುರದ ಶ್ರೀನಿವಾಸ್ ಎಂಬುವರ ಜತೆಯಲ್ಲಿ ವಾಸವಿದ್ದರು.
ಈ ಮಧ್ಯೆ ಮೂಟೆಯಲ್ಲಿ ಶವವಾಗಿ ಇವರು ಪತ್ತೆಯಾಗಿದ್ದಾರೆ. ಶ್ರೀಚಂದ್ರಶೇಖರನಾಥ ಬಡಾವಣೆ ಕಟ್ಟೆಯ ನೀರಿನಲ್ಲಿ ತೇಲುತ್ತಿದ್ದ ಮೂಟೆಗಳಿಂದ ದುರ್ವಾಸನೆ ಬರುತ್ತಿದ್ದನ್ನು ಬುಧವಾರ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯ ನೆರವಿನೊಂದಿಗೆ ಶವಗಳನ್ನು ಕಟ್ಟೆಯಿಂದ ಹೊರ ತೆಗೆದು ಪರಿಶೀಲಿಸಿದಾಗ ಅದರಲ್ಲಿ ಜಯಮ್ಮ, ರಿಷಿಕ ಅವರ ಶವಗಳು ಕಂಡುಬಂದಿವೆ.
ಇಬ್ಬರ ಶವಗಳನ್ನು ಆದಿಚುಂಚಗಿರಿ ವೈದ್ಯಕೀಯ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಇವರ ಜತಗಿದ್ದ ಶ್ರೀನಿವಾಸ್ ಅವರೇ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಬೆಳ್ಳೂರು ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.