Mysore
24
broken clouds
Light
Dark

ರಾಜ್ಯದ 25 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು‌ ಮಳೆ: ಸಚಿವ ಕೃಷ್ಣ ಬೈರೇಗೌಡ

ಮಂಡ್ಯ: ರಾಜ್ಯದ 25 ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಗಿಂತ ಶೇಕಡಾ 28ರಷ್ಟು ಹೆಚ್ಚು ಮಳೆಯಾಗಿದ್ದು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ 5 ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗಿರುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಶ್ರೀರಂಗಪಟ್ಟಣದಲ್ಲಿ ಪ್ರವಾಹ ಪೀಡಿತ ಪ್ರದೇಶ ವೆಲ್ಲಸ್ಲಿ ಸೇತುವೆ ಪರಿಶೀಲಿಸಿ ನಂತರ ಮಾತನಾಡಿದ ಅವರು, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದೆ. ಕೆ ಆರ್ ಎಸ್ ಜಲಾಶಯದಿಂದ 1ಲಕ್ಷಕ್ಕೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದ್ದು 1ಲಕ್ಷ 60ಸಾವಿರ ಕೂಸೆಕ್ಸ್ ನೀರು ತಮಿಳುನಾಡಿಗೆ ಹರಿಬಿಡಲಾಗುತ್ತಿದೆ ಎಂದರು.

ಕೃಷ್ಣ ನದಿಯಲ್ಲೂ ಕೂಡ 2.5 ಲಕ್ಷ ನೀರನ್ನು ಅಣೆಕಟ್ಟೆಯಿಂದ ನದಿಗೆ ಬಿಡಲಾಗುತ್ತಿದೆ. ಪ್ರವಾಹದ ಮಟ್ಟಕ್ಕಿಂತ ನೀರಿನ ಹರಿವಿನ ಪ್ರಮಾಣ ಕಡಿಮೆ ಇದೆ. ಮಳೆ ಬಿಡುವು ಕೊಟ್ಟಿರುವುದರಿಂದ ಪ್ರವಾಹ ಪರಿಸ್ಥಿತಿ ಸುಧಾರಿಸುವ ಹಂತದಲ್ಲಿದೆ. ಹೇಮಾವತಿ ಹಾಗೂ ಕಾವೇರಿ ನದಿ ಪಾತ್ರದಲ್ಲಿರುವ ಹಾಸನ. ಕೆ ಆರ್ ಪೇಟೆ. ಟಿ. ನರಸೀಪುರ. ಶ್ರೀರಂಗಪಟ್ಟಣ ತಾಲ್ಲೂಕುಗಳ ತಗ್ಗು ಪ್ರದೇಶದಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದರಲು ಮನವಿ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಚುರುಕು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೆ.ಆರ್.ಪೇಟೆಯ ಮಂದಗೆರೆಯ ಪ್ರದೇಶದಲ್ಲಿ ನದಿಯ ತಡೆಗೋಡೆ ಒಡೆದು ಮಣ್ಣು ಕೊರಕಲು ಆಗುತ್ತಿದೆ. ಈ ಭಾಗದಲ್ಲಿ ಕೇವಲ ಮಣ್ಣಿನ ಬ್ಯಾಗ್ ಬದಲು ಸೈಜು ಕಲ್ಲನ್ನು ಸಹ ಬಳಕೆ ಮಾಡಲು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಇದರಿಂದ ಮಣ್ಣು ಕುಸಿತದ ಪ್ರಮಾಣ ಕಡಿಮೆಯಾಗಲಿದೆ ಎಂದರು.

ನೆರೆ ಪ್ರದೇಶದಲ್ಲಿರುವ ಜನರ ಸ್ಥಳಾಂತರಕ್ಕೆ ಸಾರ್ವಜನಿಕರ ಮನವೊಲಿಕೆ ಮಾಡಬೇಕು. ನೆರೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ಒಂದು ವಾರದ ನಂತರ ನಿಖರ ಮಾಹಿತಿ ದೊರೆಯಲಿದೆ ಎಂದು ಹೇಳಿದರು.

ವಿಪತ್ತು ನಿರ್ವಹಣೆಗಾಗಿ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಗೆ ಒಟ್ಟು 770 ಕೋಟಿ ಹಣವನ್ನು ಮೀಸಲಿರಿಸಲಾಗಿದೆ. ಮಂಡ್ಯ ಜಿಲ್ಲೆಗೂ ಸಹ 20 ಕೋಟಿ ಹಣ ನೀಡಲಾಗಿದೆ. ಎಲ್ಲಾ ತಾಲ್ಲೂಕುಗಳಿಗೆ 25 ಲಕ್ಷ ರೂ ನೀಡಲಾಗಿದೆ . ಸಣ್ಣ ಪುಟ್ಟ ತೊಂದರೆಯಾದಾಗ ರಾಜ್ಯ ಸರ್ಕಾರ ನಿಭಾಯಿಸುತ್ತದೆ. ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಹಾನಿ ಆದಾಗ ಮಾತ್ರ ಎನ್ ಡಿ ಆರ್ ಎಫ್ ತಂಡಕ್ಕೆ ಆಹ್ವಾನ ನೀಡಬೇಕಿದೆ ಎಂದರು.

ಈ ವೇಳೆ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.