ಮೇಲುಕೋಟೆ: ಐತಿಹಾಸಿಕ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಪ್ರವಾಸಿಗರು ಹೈರಾಣಾಗಿದ್ದಾರೆ.
ಚಲುವರಾಯಸ್ವಾಮಿ ದೇವಾಲಯ ಕಲ್ಯಾಣಿ ಹಾಗೂ ಯೋಗಾನರಸಿಂಹಸ್ವಾಮಿ ಬೆಟ್ಟದ ಬಳಿ ತಿಂಡಿ-ತಿನಿಸು, ನೀರಿನ ಬಾಟೆಲ್ ಹಿಡಿದುಕೊಂಡಿರುವ ಪ್ರವಾಸಿಗರನ್ನು ಕಂಡರೆ ಕೋತಿಗಳು ಅಠಾತ್ ದಾಳಿ ನಡೆಸಿ ಕೈಯಿಂದ ಪದಾರ್ಥಗಳನ್ನು ಕಿತ್ತುಕೊಳ್ಳುತ್ತವೆ. ಇದಲ್ಲದೇ ಬ್ಯಾಗ್‌ಗಳನ್ನು ಸಹ ಕಿತ್ತುಕೊಂಡು ಓಡಿ ಹೋಗಲು ಹೊಂಚು ಹಾಕುತ್ತವೆ.
ಇನ್ನು ಯೋಗಾನರಸಿಂಹಸ್ವಾಮಿ ಬೆಟ್ಟದ ಮೇಲೆ ಕೋತಿಗಳೇ ರಾಜ್ಯಭಾರ ನಡೆಸುತ್ತಿದ್ದು, ಹಿಂಡು ಹಿಂಡು ಕೋತಿಗಳನ್ನು ನೋಡಿ ಪ್ರವಾಸಿಗರು ಹೈರಾಣಾಗಿದ್ದಾರೆ. ವಾಹನಗಳನ್ನು ಬಿಡದ ಕೋತಿಗಳು ಅಲ್ಲಿ ದಾಳಿ ನಡೆಸಿರುವ ಹಲವು ಪ್ರಕರಣಗಳು ದಾಖಲಾಗಿವೆ.
ಪ್ರವಾಸಿಗರ ಜೊತೆ ಸ್ಥಳೀಯರು ಸಹ ಕೋತಿಗಳ ಹಾವಳಿಯಿಂದ ಬೇಸತ್ತು ಹೋಗಿದ್ದು, ಮನೆಯಲ್ಲಿರುವ ಸಾಮಗ್ರಿಗಳನ್ನು ಕೋತಿಗಳು ನಾಶಪಡಿಸುತ್ತಿವೆ. ಇದರ ಜೊತೆಗೆ ಕೃಷಿ ಜಮೀನುಗಳಲ್ಲಿಯೂ ಕೋತಿಗಳು ಹಣ್ಣು-ತರಕಾರಿಗಳನ್ನು ನಾಶಪಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೋತಿಗಳ ಹಾವಳಿ ಕಡಿಮೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.