ಮಂಡ್ಯ: ಯಾರನ್ನೋ ಮೆಚ್ಚಿಸಲಿಕ್ಕೆ ಈ ಉದ್ಯೋಗ ಮೇಳ ಮಾಡಿಲ್ಲ. ಜನರ ಋಣ ತೀರಿಸುವ ಕೆಲಸ ಮಾಡ್ತಿದ್ದೇನೆ ಅಷ್ಟೇ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಉದ್ಯೋಗ ಮೇಳದ ಸಮಾರೋಪದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಕುಮಾರಸ್ವಾಮಿ ಜನರಿಗೆ ಕೆಲಸ ಕೊಡಿಸಲಿ, ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಿ ಎಂದು ಕೆಲ ಕಾಂಗ್ರೆಸ್ ಸಚಿವರು ಹೇಳಿದ್ದಾರೆ ಎಂದು ವರದಿಗಾರರು ಸಚಿವರನ್ನು ಗಮನ ಸೆಳೆದಾಗ ಸಚಿವರು ಹೇಳಿದ್ದಿಷ್ಟು; ಟಕ್ಕರ್ ಕೊಡುವುದಲ್ಲ ನನ್ನ ಜವಾಬ್ದಾರಿ, ನನ್ನ ಕೆಲಸ ನಾನು ನಿರ್ವಹಣೆ ಮಾಡಿದ್ದೇನೆ. ಇನ್ನೊಬ್ಬರ ಮೆಚ್ಚಿಸಲು ನಾನು ಕೆಲಸ ಮಾಡಲ್ಲ, ಜನರು ನಂಬಿ ಮತ ಕೊಟ್ಟಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡ್ತಿದ್ದೇನೆ. ಇನ್ನೊಬ್ಬರ ಸರ್ಟಿಫಿಕೇಟ್ ಗೆ ನಾನು ಕೆಲಸ ಮಾಡುವವನಲ್ಲ ನಾನು. ಸಣ್ಣದಾಗಿ ಮಾತನಾಡುವವರಿಗೆ ಇದೆ ತಕ್ಕ ಉತ್ತರ ಎಂದರು ಅವರು.
2018ರಲ್ಲಿ ನಾನು ಸಿಎಂ ಆಗಿದ್ದಾಗ 50 ಸಾವಿರ ಉದ್ಯೋಗ ಸೃಷ್ಟಿಸಲು ಡಿಸ್ನಿಲ್ಯಾಂಡ್ ಯೋಜನೆ ರೂಪಿಸಲಾಗಿತ್ತು. ಕಾವೇರಿ ಪ್ರತಿಮೆ ಸ್ಥಾಪಿಸುವ ಉದ್ದೇಶ ಇತ್ತು. ನನ್ನ ಸರಕಾರ ಹೋಯಿತು, ಅದು ಅಲ್ಲಿಗೇ ನಿಂತಿತು. ಇವರು ಏನು ಮಾಡುತ್ತಾರೆ ಎನ್ನುವುದನ್ನು ನೋಡೋಣ. ರೈತ ವಿರೋಧಿ ನೀತಿ ಅನುಸರಿಸಿ ಯಾವುದೇ ಕಾರ್ಯಕ್ರಮ ಆಗಬಾರದು. ನಮ್ಮ ರೈತರ ಹೊಲಕ್ಕೆ ನೀರು ಬಿಡಬೇಕು. ರೈತರನ್ನು ಕರೆದು ಅವರ ಅನುಮಾನಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.





