Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮನ್‌ಮುಲ್‌ ಹೊಸ ದಾಖಲೆ

ಮಂಡ್ಯ: ಮಂಡ್ಯ ಜಿಲ್ಲಾವಾರು ಒಕ್ಕೂಟ 11 ಲಕ್ಷ ಕಿಲೋಗೂ ಅಧಿಕ ಹಾಲು ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಮನ್‌ಮುಲ್‌ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ಹಾಲು ಸಂಗ್ರಹಿಸುತ್ತಿರುವುದು ಇದೇ ಮೊದಲು.

ಜಿಲ್ಲಾವಾರು ಹಾಲು ಸಂಗ್ರಹಣೆಯಲ್ಲಿ ಕಳೆದ 10 ವರ್ಷಗಳಿಂದ ಮನ್‌ಮುಲ್‌ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. 2015ರಲ್ಲಿ 7.71 ಲಕ್ಷ ಕಿಲೋ, 2016ರಲ್ಲಿ 7.88 ಲಕ್ಷ ಕಿಲೋ, 2017ರಲ್ಲಿ 9.18 ಲಕ್ಷ ಕಿಲೋ, 2018ರಲ್ಲಿ 9.34 ಲಕ್ಷ ಕಿಲೋ, 2019ರಲ್ಲಿ 9.19 ಲಕ್ಷ ಕಿಲೋ, 2020 ರಲ್ಲಿ 9.34 ಕಿಲೋ, 2021ರಲ್ಲಿ 9.73 ಲಕ್ಷ ಕಿಲೋ, 2022 ರಲ್ಲಿ 10.21 ಕಿಲೋ ಗರಿಷ್ಠ ಪ್ರಮಾಣದ ಹಾಲನ್ನು ಒಂದೇ ದಿನ ಸಂಗ್ರಹಿಸಿತ್ತು.

ಆದರೆ, ಈ ವರ್ಷ ಜೂನ್.‌18ರಂದು 11,23,680 ಕಿಲೋ ಹಾಲು ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಸಾಮಾನ್ಯವಾಗಿ ಜೂನ್‌ ಕೊನೆಯ ವಾರ ಅಥವಾ ಜುಲೈನಲ್ಲಿ ಗರಿಷ್ಠ ಪ್ರಮಾಣದ ಹಾಲು ಮನ್‌ಮುಲ್‌ಗೆ ಪೂರೈಕೆಯಾಗುತ್ತಿತ್ತು. ಈ ಬಾರಿ ಜೂನ್‌ ಮೂರನೇ ವಾರದಲ್ಲೇ ಗರಿಷ್ಠ ಪ್ರಮಾಣದ ಹಾಲು ಸಂಗ್ರಹವಾಗಿದೆ. ಈ ಮೂಲಕ ತನ್ನದೇ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.

11.23 ಲಕ್ಷ ಕಿಲೋ ಹಾಲು ಸಂಗ್ರಹಿಸುತ್ತಿರುವ ಮಂಡ್ಯ ಒಕ್ಕೂಟ 4ನೇ ಸ್ಥಾನದಲ್ಲಿದೆ. ಆದರೆ, ಜಿಲ್ಲಾವಾರು ಪಟ್ಟಿಯಲ್ಲಿ ಮಂಡ್ಯ ಮೊದಲ ಸ್ಥಾನದಲ್ಲಿದೆ. ಬೆಂಗಳೂರು, ಹಾಸನ, ಕೋಲಾರ ಒಕ್ಕೂಟ 2-3 ಜಿಲ್ಲೆಗಳನ್ನು ಒಳಗೊಂಡಿದ್ದರೂ, ಅವುಗಳು ಸಂಗ್ರಹಿಸುವ ಹಾಲಿನ ಪ್ರಮಾಣ ಮನ್‌ಮುಲ್‌ನ ಅರ್ಧದಷ್ಟೂ ಇಲ್ಲ. ಆದರೆ ಮನ್‌ಮುಲ್‌ ವ್ಯಾಪ್ತಿಯಲ್ಲಿರುವ ಏಕೈಕ ಜಿಲ್ಲೆ ಮಂಡ್ಯ.

ಮಂಡ್ಯ ಜಿಲ್ಲೆಯಲ್ಲಿ ನಿತ್ಯ ಸುಮಾರು 18 ಲಕ್ಷ ಕೆಜಿಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ಮನ್‌ಮುಲ್‌ಗೆ ಪೂರೈಕೆಯಾಗುತ್ತಿರುವ ಹಾಲಿನ ಹೊರತಾಗಿ ಉಳಿದದ್ದು ಸ್ಥಳೀಯವಾಗಿ ಮಾರಾಟವಾಗುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ 1308 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 1299 ಸಂಘಗಳು ಹಾಲು ಸಂಗ್ರಹಿಸುತ್ತಿವೆ. ಇವುಗಳಲ್ಲಿ 583 ಮಹಿಳಾ ಸರ್ಕಾರ ಸಂಘಗಳಿವೆ. 2,73,955 ಒಟ್ಟು ಸದಸ್ಯರಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಹಾಲು ಪೂರೈಸುವ ಸಕ್ರಿಯ ಸದಸ್ಯರಿದ್ದಾರೆ.

Tags: