ಮಂಡ್ಯ: ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಬೇಡಿಕೆಕ್ಕಿಂತ ಹೆಚ್ಚಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸ್ಪಷ್ಟಪಡಿಸಿದರು.
ಗುರುವಾರ(ಜು.18) ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಕೆ.ಆರ್.ಎಸ್ ನಲ್ಲಿ ಒಳ ಹರಿವು ಹೆಚ್ಚಿದೆ. ಕೃಷಿ ಸಚಿವರು ಸಹ ಬೆಳೆಗಳಿಗೆ ನೀರು ಬಿಡುಗಡೆ ಮಾಡುವ ಬಗ್ಗೆ ತಿಳಿಸಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಬೀಜ ವಿತರಣೆಗೆ ಸಜ್ಜಾಗಿದ್ದಾರೆ. ಈ ಬಗ್ಗೆ ರೈತರಲ್ಲಿ ಯಾವುದೇ ಆತಂಕ ಬೇಡ ಎಂದು ಅವರು ಹೇಳಿದರು.
2024-25 ನೇ ಸಾಲಿನ ಪೂರ್ವ ಮುಂಗಾರಿಗೆ ಸಂಬಂಧಿಸಿದಂತೆ 14,60,913 ತಾಕುಗಳ ಬೆಳೆ ಸಮೀಕ್ಷೆ ನಡೆಸಬೇಕಿದ್ದು, 687535 ತಾಕುಗಳ ಬೆಳೆ ಸಮೀಕ್ಷೆ ನಡೆಸಿ ಶೇ 47.06 ಸಾಧನೆಯಾಗಿದೆ. ಬೆಳೆ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಿ ಒಂದು ವಾರದೊಳಗೆ ಶೇ 100 ರಷ್ಟು ಸಾಧನೆಯಾಗಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜು ಮಾತನಾಡಿ, ಕೃಷಿ ಅಧಿಕಾರಿಗಳು ರೈತರಿಗೆ ಹಸಿರು, ಜೈವಿಕ ಹಾಗೂ ರಾಸಾಯನಿಕ ಗೊಬ್ಬರಗಳ ಬಳಕೆಯ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಿ ಹೆಚ್ಚು ಬಳಸುವಂತೆ ಪ್ರೇರೇಪಿಸಬೇಕು ಎಂದರು.
ಜಿಲ್ಲೆಯಲ್ಲಿ 9996 ಕ್ವಿಂಟಲ್ ಭತ್ತ ಬೇಡಿಕೆ ಇದ್ದು, 10764 ಕ್ವಿಂಟಾಲ್ ಭತ್ತ ದಾಸ್ತಾನು ಇದೆ. ರಾಗಿ 985 ಕ್ವಿಂಟಾಲ್ ಬೇಡಿಕೆ ಇದ್ದು, 1538 ಕ್ವಿಂಟಾಲ್ ದಾಸ್ತಾನು ಇದೆ. ವಿವಿಧ ರಸಗೊಬ್ಬರ ಒಟ್ಟು 54,844 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಅಶೋಕ್ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ಕೃಷಿ ಇಲಾಖೆ ಉಪನಿರ್ದೇಶಕರಾದ ಮಾಲತಿ, ಮಮತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.