ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಹೊಸ ದಾಖಲೆಯನ್ನು ಸೃಷ್ಟಿ ಮಾಡುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿ ತಿಳಿಸಿದರು.
ಅವರು ಇಂದು ಜಿಲ್ಲಾಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಹೆಜ್ಜೆಯನ್ನು ಇಡಲಾಗುವುದು. ಇದು ಮುಂದೆ ಎಲ್ಲ ಸಾಹಿತ್ಯ ಸಮ್ಮೇಳನಕ್ಕೂ ಕೂಡ ಪರಂಪರೆಯಾಗಿ ಮುಂದುವರೆಯುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯ ಸದಸ್ಯರುಗಳು ಮತ್ತು ಜಿಲ್ಲಾಡಳಿತ ಒಟ್ಟಿಗೆ ಸೌಹಾರ್ದತೆಯಿಂದ ಕೆಲಸ ನಿರ್ವಹಿಸಲಿ ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಕಾರ್ಯಕ್ರಮದಲ್ಲಿ ಹೊಸತನವನ್ನು ತರಲು ಆಧುನಿಕರಣದ ಸ್ಪರ್ಶವಾಗಬೇಕಿದೆ. ಹೊಸ ಹೆಜ್ಜೆಯನ್ನು ಇಡುವ ಸಂದರ್ಭದಲ್ಲಿ ಅನೇಕ ಟೀಕೆಗಳಿಗೆ ಗುರಿಯಾಗುವುದು ಸಹಜ ಅದನ್ನು ಸ್ವಾಗತಿಸಬೇಕು. ಪರಸ್ಪರ ಸಹಕಾರ, ಸಹಯೋಗ, ಸಹಭಾಗಿತ್ವ, ಸಹಾಯ ಮನೋಭಾವ, ಸಮನ್ವಯತೆ ಸೌಹಾರ್ದತೆ ಮತ್ತು ಸಮಾಲೋಚನೆಯಿಂದ ಒಟ್ಟಿಗೆ ಕೆಲಸ ಮಾಡಿದಾಗ ಟೀಕೆಗಳು ಸಾಯುತ್ತವೆ ಎಂದರು.
ಸಮ್ಮೇಳನಕ್ಕೆ ಜಿಲ್ಲಾಡಳಿತವು ಸಂಪೂರ್ಣ ಸಹಕಾರವನ್ನು ನೀಡುತ್ತಿದೆ. ಈ ರೀತಿಯ ಸಹಕಾರ ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ಸಿಕ್ಕರೆ ಯಾವುದೇ ಕಾರಣಕ್ಕೂ ಕಾರ್ಯಕ್ರಮದಲ್ಲಿ ತೊಂದರೆಯಾಗಲಿ, ಅಪಸ್ವರವಾಗಲಿ ಬರುವುದಿಲ್ಲ ಎಂದರು.
ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ 28 ಸಮಿತಿಗಳು ರಚನೆಯಾಗಿದೆ. ಅವುಗಳಲ್ಲಿ ಮೌಲಿಕ ಚಿಂತನೆಗಳು ಆಗಬೇಕು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಿಗರನ್ನು ಕರೆತರುವ ಅವಶ್ಯಕತೆ ಇಲ್ಲ. ಇದು ಕನ್ನಡಿಗರ, ಕನ್ನಡ ಭಾಷೆಯ, ಕನ್ನಡ ಸಂಸ್ಕೃತಿ, ಕನ್ನಡತನದ ನಮ್ಮ ಅಸ್ಮಿತೆಯ ಸಮ್ಮೇಳನವಾಗಿದೆ. ಇಡೀ ಕರ್ನಾಟಕ ಜಿಲ್ಲೆಯ, ಗಡಿಭಾಗದ ಹಾಗೂ ವಿದೇಶದಲ್ಲಿರುವ ಕನ್ನಡ ಅಭಿಮಾನಿಗಳು ಸ್ವತಃ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.
ಕನ್ನಡಕ್ಕೆ ಜಾತಿ, ಧರ್ಮ ಇಲ್ಲ ಕನ್ನಡವೊಂದೇ ಧರ್ಮವಾಗಿದೆ. ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿ, ಜಲ, ನೆಲದ ಬಗ್ಗೆ ಅತ್ಯಂತ ಗಂಭೀರ ಚರ್ಚೆ ನಡೆಯುತ್ತದೆ. ಇಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆಡಳಿತ ಹೇಗೆ ನಡೆಯಬೇಕೆಂದು ದಿಕ್ಸೂಚಿಯನ್ನು ತೋರಿಸುತ್ತದೆ. ಜೊತೆಗೆ ಸಮ್ಮೇಳನದಲ್ಲಿ ಭಾವೈಕ್ಯತೆ ಉಂಟಾಗುತ್ತದೆ ಎಂದರು.