Mysore
23
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಮತ್ತೆ ಮುನ್ನೆಲೆಗೆ ಬಂದ ಹೊಸ ಸಕ್ಕರೆ ಕಾರ್ಖಾನೆ ವಿಚಾರ

ಮಂಡ್ಯ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಹೊಸ ಸಕ್ಕರೆ ಕಾರ್ಖಾನೆಯ ರೂಪುರೇಷೆಗಳು ಹೇಗಿರಬೇಕೆಂಬ ಕುರಿತಂತೆ ಪಕ್ಷಾತೀತವಾಗಿ ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವುದಕ್ಕೆ ವೇದಿಕೆ ಸಿದ್ಧಗೊಂಡಿದೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ಮೈಶುಗರ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಅವರು ಎಲ್ಲಾ ಪಕ್ಷಗಳ ರೈತ ಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ಕರೆದು ಸಾಧಕ-ಬಾಧಕಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ.

ಹೊಸ ಕಾರ್ಖಾನೆಯನ್ನು ಎಲ್ಲಿ ಸ್ಥಾಪನೆ ಮಾಡಬೇಕೆಂಬ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುವ ಮುನ್ನ ಕಾರ್ಖಾನೆಗೆ ಸಿಗಬಹುದಾದ ಕಬ್ಬಿನ ಪ್ರಮಾಣ, ಕಬ್ಬು ಅರೆಯುವ ಸಾಮರ್ಥ್ಯ, ಸಹ ವಿದ್ಯುತ್‌ ಘಟಕ ಆರಂಭಗೊಳ್ಳುವುದಕ್ಕೆ ಪೂರಕವಾಗಿ ಕಬ್ಬು ಸಿಗಲಿದೆಯೇ ಎಂಬ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ಕುರಿತಂತೆ ತಾಂತ್ರಿಕ ಸಮಿತಿ ಸಿದ್ಧಪಡಿಸುವ ವರದಿಯನ್ನು ಆಧರಿಸಿ ಎಲ್ಲಿ ಸ್ಥಾಪನೆ ಮಾಡಬೇಕು. ಏನೆಲ್ಲಾ ಸೌಲಭ್ಯ ಒಳಗೊಂಡಿರಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಹೊಸ ಕಾರ್ಖಾನೆಯನ್ನು ಈಗ ಕಾರ್ಖಾನೆ ಇರುವ ಸ್ಥಳದಲ್ಲೇ ಸ್ಥಾಪಿಸಿದರೆ ಎಷ್ಟು ಹಣ ಖರ್ಚಾಗಲಿದೆ.? ಬೇರೆ ಬೇರೆ ಘಟಕಗಳ ಸ್ಥಾಪನೆಗೆ ಅವಕಾಶ ಸಿಗಲಿದೆಯೇ, ಬೇರೆಡೆ ಸ್ಥಾಪಿಸಿದರೆ ಆಗುವ ಖರ್ಚೆಷ್ಟು. ರೈತರಿಗೆ ಆಗಬಹುದಾದ ಅನುಕೂಲಗಳೇನು ಎನ್ನುವುದನ್ನು ತಾಂತ್ರಿಕ ಸಮಿತಿ ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಕಳೆದ ವರ್ಷ ಮೈಶುಗರ್‌ ಕಾರ್ಖಾನೆ ಸುಮಾರು 1.90 ಲಕ್ಷ ಟನ್‌ ಕಬ್ಬು ಅರೆದಿದೆ. ಎರಡನೇ ಮಿಲ್‌ ಕಾರ್ಯಾಚರಣೆ ಆರಂಭಿಸಿದರೆ ನಿರೀಕ್ಷೆಯಂತೆ ನಿತ್ಯ 5 ಸಾವಿರ ಟನ್‌ ಕಬ್ಬು ಅರೆಯುವ ಸಾಮರ್ಥ್ಯ ಹೊಂದಲಿದೆ. ಅದಕ್ಕಾಗಿ ಹೊಸ ಕಾರ್ಖಾನೆ ಸ್ಥಾಪನೆಯ ಉದ್ದೇಶವಾದರೂ ಏನೆಂಬುದು ಹಲವರ ಪ್ರಶ್ನೆಯಾಗಿದೆ.

 

Tags:
error: Content is protected !!