ಮಂಡ್ಯ: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಶನಿವಾರ(ಜು.6) ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಕೆ.ಆರ್.ಎಸ್ ಅಣೆಕಟ್ಟಿನ ಹತ್ತಿರ ಟ್ರಯಲ್ ಬ್ಲಾಸ್ಟ್ ನಡೆಸುವ ಸಂಬಂಧ ರೈತರೊಂದಿಗೆ ಚರ್ಚೆ ನಡೆಸಿದರು.
ಚರ್ಚೆಯಲ್ಲಿ ಭಾಗವಹಿಸಿದ ರೈತರು ತಮ್ಮ ಅಭಿಪ್ರಾಯ ಮಂಡಿಸಿದರು. ಅಣೆಕಟ್ಟು ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಒಕ್ಕೊರಲೆಯಿಂದ ರೈತ ನಾಯಕರು ಹೇಳಿದರು. ಸಚಿವರು ರೈತ ಮುಖಂಡರ ಎಲ್ಲಾ ಅಭಿಪ್ರಾಯಗಳನ್ನು ಸಂಗ್ರಹಿಸಿದರು.
ಚರ್ಚೆಯಲ್ಲಿ ಭಾಗವಹಿಸಿದ ರೈತ ಮುಖಂಡರಾದ ಕೆಂಪೂಗೌಡ ಮಾತನಾಡಿ, ಅಣೆಕಟ್ಟು ಕಟ್ಟುವುದು ಕಷ್ಟಕರ, ಇರುವ ಅಣೆಕಟ್ಟನ್ನು ಸಂರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಕೆ.ಆರ್.ಎಸ್ ಸುತ್ತ ಗಣಿಗಾರಿಕೆ ನಡೆಸುವುದಿಲ್ಲ ಎಂದು ಸರ್ಕಾರದಿಂದ ಸುಗ್ರಿವಾಜ್ಞೆ ಹೊರಡಿಸಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಡ್ಯಾಮ್ ಸೆಫ್ಟಿ ಆಕ್ಟ್ (Dam safety act) ಪ್ರಕಾರ ರಾಜ್ಯದಲ್ಲಿರುವ ಎಲ್ಲಾ ಅಣೆಕಟ್ಟುಗಳ ರಕ್ಷಣೆ ಮಾಡಲು ಹೊಸ ಕಾನೂನುಗಳನ್ನು ಜಾರಿಗೆ ತರಬೇಕು. ತಂತ್ರಜ್ಞಾನ ಮುಂದುವರಿದಿದೆ, ಒಂದು ಟ್ರಯಲ್ ಬ್ಲಾಸ್ಟ ನಡೆಸಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಮುಂದೆ ಅನುಮತಿ ನೀಡಿದಾಗ ಹಲವಾರು ಬ್ಲಾಸ್ಟ್ ಗಳ ಸಂದರ್ಭದಲ್ಲಿ ಪರಿಣಾಮ ಬೇರೆ ರೀತಿ ಇರಬಹುದು. ಲಕ್ಷಾಂತರ ಜನಕ್ಕೆ ಜೀವನ ನೀಡುವ ಅಣೆಕಟ್ಟಿನ 25 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡಬಾರದು. ಇದು ಕೇವಲ ಕೆ.ಆರ್.ಎಸ್ ಮಾತ್ರವಲ್ಲ ರಾಜ್ಯದ ಎಲ್ಲಾ ಅಣೆಕಟ್ಟಿಗೆ ಅನ್ವಯಿಸಬೇಕು ಎಂದು ರೈತ ಮುಖಂಡ ಪ್ರಸನ್ನ ಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.