ಮಂಡ್ಯ: ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅರ್ಹ ಫಲಾನುಭವಿಗಳು ಯಾವುದೇ ಕಾರಣಕ್ಕೂ ಯೋಜನೆಯ ಸೌಲಭ್ಯದಿಂದ ವಂಚಿತರಾಗಬಾರದು ಎಂದು ರಾಜ್ಯಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಮೈಸೂರು ವಿಭಾಗದ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದ ಪ್ರಮುಖ ಯೋಜನೆಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮುಖ್ಯಮಂತ್ರಿಗಳು ಈ ಐದು ಯೋಜನೆಗಳಿಗಾಗಿ ಸಾಕಷ್ಟು ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಫಲಾನುಭವಿಗಳ ಹೆಸರು ಯೋಜನೆಯಲ್ಲಿ ಬಿಟ್ಟು ಹೋಗಿದ್ದರೆ ಆದಷ್ಟು ಬೇಗ ಅಂತಹ ಹೆಸರುಗಳನ್ನೂ ಸೇರ್ಪಡೆ ಮಾಡುವ ಕೆಲಸವಾಗಬೇಕು ಎಂದರು.
ಅನ್ನಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದಿರುವವರ ಮೇಲೆ ಕ್ರಮ ಕೈಗೊಳ್ಳಿ. ಪಡಿತರ ಅಂಗಡಿಗಳಲ್ಲಿ ಯಾವುದೇ ರೀತಿಯ ಅನ್ಯಾಯ ನಡೆಯದಂತೆ ನಿಗಾವಹಿಸಬೇಕು. ಈ ಯೋಜನೆಯಡಿ ಸಾರ್ವಜನಿಕರಿಗೆ ನೀಡುವ ಪಡಿತರದ ತೂಕದಲ್ಲಿ ಮೋಸವಾಗಬಾರದು. ಅಧಿಕಾರಿಗಳು ಪಡಿತರ ವಿತರಣಾ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಹೇಳಿದರು.
ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಸಮರ್ಪಕ ಹಾಗೂ ಪಾರದರ್ಶಕವಾಗಿ ಯೋಜನೆಗಳನ್ನು ತಲುಪಿಸಲು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಅದಾಲತ್ ಮಾಡಬೇಕು ಎಂದರು.
ಗೃಹಲಕ್ಷ್ಮಿ
ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 2023 ಆಗಸ್ಟ್ ಮಾಹೆಯಿಂದ 2024 ಜೂನ್ ಮಾಹೆವರೆಗೆ ಒಟ್ಟು 450734 ಅರ್ಹ ಫಲಾನುಭವಿಗಳಿದ್ದು, ಅದರಲ್ಲಿ 441952 ಫಲಾನುಭವಿಗಳು ಗೃಹ ಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಗೃಹ ಲಕ್ಷ್ಮಿ ಯೋಜನೆಗಾಗಿ ಸರ್ಕಾರದಿಂದ ಈಗಾಗಲೇ 949.82 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಶೇ.98.05 ಪ್ರಗತಿಯನ್ನು ಸಾಧಿಸಲಾಗಿದೆ ಎಂದರು.
ಗೃಹಲಕ್ಷ್ಮಿ ಹಣ ಜೂ.೨೦೨೪ ರವರೆಗೂ ಪಾವತಿಯಾಗಿದೆ. ಕಳೆದೆರಡು ತಿಂಗಳಿಂದ ಪಾವತಿಯಾಗಿಲ್ಲ. ಕೆಲ ತಾಂತ್ರಿಕ ತೊಂದರೆಯಿಂದಾಗಿ ವಿಳಂಬವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಳ್ಕಾರ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ೨ ಕಂತಿನ ಹಣ ಬಿಡುಗಡೆಯಾಗುವುದು ಎಂದರು.
ಅನ್ನಭಾಗ್ಯ
ಅನ್ನಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 2023 ಜುಲೈ ಮಾಹೆಯಿಂದ 2024 ಜೂನ್ ಮಾಹೆವರೆಗೆ ಒಟ್ಟು4,43,376 ಫಲಾನುಭವಿಗಳು ಅನ್ನಭಾಗ್ಯ ಯೋಜನೆ ಪಡೆಯುತ್ತಿದ್ದು, 287.13 ಕೋಟಿ ರೂ ಅನುದಾನ ಬಿಡುಗಡೆಯಾಗಿರುತ್ತದೆ ಎಂದರು
ಶಕ್ತಿ ಯೋಜನೆ
ಶಕ್ತಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 2023 ಜೂನ್ ಮಾಹೆಯಿಂದ 2024 ಆಗಸ್ಟ್ ಮಾಹೆವರೆಗೆ ಮಂಡ್ಯ ವಿಭಾಗದಲ್ಲಿ ಒಟ್ಟು 474 ವಾಹನಗಳು ಸಂಚಾರ ಮಾಡುತ್ತಿವೆ. ಪ್ರತಿದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಶಕ್ತಿ ಯೋಜನೆ ಪೂರ್ವದಲ್ಲಿ 204724 ಪ್ರಯಾಣ ಮಾಡುತ್ತಿದ್ದರು ಆದರೆ ಶಕ್ತಿ ಯೋಜನೆ ನಂತರ ಒಟ್ಟು 282030 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ.
ಶಕ್ತಿ ಯೋಜನೆಯಡಿ ಪ್ರತಿ ದಿನ ಒಟ್ಟು 184416 ಶೇ.65.38 ರಷ್ಟು ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟಾರೆ ಶಕ್ತಿ ಯೋಜನೆಯಡಿಯಲ್ಲಿ ಒಟ್ಟು 830.78 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಸರ್ಕಾರದಿಂದ ಈಗಾಗಲೇ 20939.84 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದರು.
ಗೃಹ ಜ್ಯೋತಿ
ಜಿಲ್ಲೆಯಲ್ಲಿ 2024 ರ ಆಗಸ್ಟ್ ಮಾಹೆವರೆಗೆ 507384 ಗೃಹ ಜ್ಯೋತಿ ಅರ್ಹ ಗ್ರಾಹಕರಿದ್ದು ಅದರಲ್ಲಿ 480670 ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ನೋಂದಣಿಯಾಗಿದ್ದು, ನೊಂದಣಿಯಾಗದ ಗ್ರಾಹಕರು ಒಟ್ಟು 26714, ಜಿಲ್ಲೆಯಲ್ಲಿ ಶೇಕಡವಾರು 94.73 ರಷ್ಟು ಜನ ಗೃಹ ಜ್ಯೋತಿಗೆ ನೋಂದಣಿಯಾಗಿದ್ದರೆ ಎಂದರು.
ಯುವ ನಿಧಿ
ಯುವ ನಿಧಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 2024ರ ಆಗಸ್ಟ್ ಮಾಹೆಯ ಅಂತ್ಯಕ್ಕೆ ಒಟ್ಟು 7975 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ. ಒಟ್ಟು-2,38,39,500 ರೂ ಅನುದಾನ ಬಳಕೆಯಾಗಿದೆ ಎಂಬ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ ಕುಮಾರ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಇಂದು ಹಮ್ಮಿಕೊಳ್ಳಲಾಗಿದೆ. ಪ್ರತಿ ಕೆಡಿಪಿ ಸಭೆಯಲ್ಲಿ ಐದು ಯೋಜನೆಗಳ ಬಗ್ಗೆ ಚರ್ಚಿಸಬೇಕೆಂದು ತಿಳಿಸಲಾಗಿದೆ. ಜೊತೆಗೆ ಈ ಯೋಜನೆಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಗ್ಯಾರಂಟಿ ಯೋಜನೆಗಳಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಜನರು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ವರದಿಯ ಮಾಹಿತಿಯನ್ನು ನೀಡಿದರು.
ಫಲಾನುಭವಿಗಳ ಅಭಿಪ್ರಾಯ
ಸಭೆಯಲ್ಲಿ ಫಲಾನುಭವಿಗಳು ಐದು ಗ್ಯಾರಂಟಿ ಯೋಜನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅನ್ನ ಭಾಗ್ಯ ಯೋಜನೆಯು ಬಡವರಿಗೆ ತುಂಬಾ ಉಪಯೋಗವಾಗಿದೆ. ಜೊತೆಗೆ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿಯೋಜನೆಗಳಿಂದ ಒಂದು ಕುಟುಂಬಕ್ಕೆ ತಿಂಗಳಿಗೆ ಸುಮಾರು ರೂ. 3,500 ರಿಂದ 4,000 ಹಣವನ್ನು ಉಳಿತಾಯ ಮಾಡುತಿದ್ದು, ಉಳಿತಾಯದ ಹಣದಿಂದ ತುರ್ತು ಆರೋಗ್ಯ, ಮಕ್ಕಳ ವಿದ್ಯಾಭ್ಯಾಸ, ಜೀವಾವಿಮೆ, ಔಷದ,ಕುರಿ,ಹಸು ಸಾಕಾಣಿಕೆ ಮಾಡುತ್ತಿದ್ದೇವೆ. ಈ ಐದು ಯೋಜನೆಗಳಿಂದ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗುತ್ತಿದೆ ಎಂದರು.
ಶಕ್ತಿಯೋಜನೆಯಿಂದ ಮಹಿಳೆಯರಿಗೆ ತುಂಬಾ ಉಪಯುಕ್ತವಾಗಿದೆ ಕಛೇರಿ, ಆಸ್ಪತ್ರೆ, ಶಾಲಾಕಾಲೇಜು, ಇನ್ನಿತರ ಕೆಲಸ ಕಾರ್ಯಗಳಲ್ಲಿ ಬೇರೊಬ್ಬರ ಮೇಲೆ ಅವಲಂಬಿತವಾಗಿರದೆ, ನಮ್ಮ ಕೆಲಸದಲ್ಲಿ ನಾವು ತೊಡಗಬಹುದು. ಶಕ್ತಿ ಯೋಜನೆಯಡಿಯಲ್ಲಿ ಹೆಚ್ಚು ಬಸ್ಸುಗಳು ಇರುವುದರಿಂದ ನಮ್ಮ ಸಮಯವೂ ಸಹ ಉಳಿತಾಯವಾಗುತ್ತದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಫಲಾನುಭವಿಗಳು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಗೃಹ ಜ್ಯೋತಿ ಯೋಜನೆಯಿಂದ ನಮಗೆ ಬಹಳ ಅನುಕೂಲವಾಗಿದೆ ಗೃಹ ಜ್ಯೋತಿ ಯೋಜನೆ ಬರುವುದಕ್ಕೂ ಮೊದಲು ತಿಂಗಳಿಗೆ 600-800 ರೂ ಕರೆಂಟ್ ಬಿಲ್ ಪಾವತಿ ಮಾಡುತ್ತಿದ್ದೆವು ಆದರೆ ಈಗ ಈ ಯೋಜನೆಯಿಂದ ತಿಂಗಳಿಗೆ ಬಹಳ ಕಮ್ಮಿ ಕರೆಂಟ್ ಬಿಲ್ ಬರುತ್ತಿದೆ ಇದರಿಂದ ಪ್ರತಿಯೊಂದು ಮನೆಗೂ ಅನುಕೂಲವಾಗುತ್ತಿದೆ ಎಂದರು.
ಸಭೆಯಲ್ಲಿ ಮಂಡ್ಯ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ, ಉಪಾಧ್ಯಕ್ಷರುಗಳಾದ ಪ್ರಶಾಂತ್, ರಾಜೇಂದ್ರ ಎಸ್ ಹೆಚ್, ಕೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.