ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಜನತೆಗೆ ಅರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎರಡು ತಿಂಗಳಿನಲ್ಲಿ 180ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಮಂಡ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಲರ್ಟ್ ಆಗಿದ್ದು, ಡೆಂಗ್ಯೂ ಪ್ರಕರಣ ಏರಿಕೆಯಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಡೆಂಗ್ಯೂ ಪ್ರಕರಣ ಜಾಸ್ತಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮಂಡ್ಯ ಡಿಹೆಚ್‌ಓ ಡಾ.ಮೋಹನ್ ಅವರು, ಜಿಲ್ಲೆಯಲ್ಲಿ ಇದುವರೆಗೂ 1450 ಡೆಂಗ್ಯೂ ಪ್ರಕರಣಗಳ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 180 ಪ್ರಕರಣಗಳು ಪಾಸಿಟಿವ್ ವರದಿಯಾಗಿವೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಸಾವಿನ ಬಗ್ಗೆ ಇದುವರೆಗೂ ವರದಿಯಾಗಿಲ್ಲ. ಡೆಂಗ್ಯೂ ಪ್ರಕರಣಗಳನ್ನು ತಡೆಯಲು ಆರೋಗ್ಯ ಇಲಾಖೆಯಿಂದ ಗ್ರಾಮ ಸರ್ವೆ ಆರಂಭಿಸಲಾಗಿದೆ. ನೀರು ನಿಂತ ಜಾಗಗಳಲ್ಲಿ ಶುಚಿತ್ವ ಕಾಪಾಡಲು ಸೂಚನೆ ನೀಡಲಾಗಿದೆ. ನಿಲ್ಲುವ ನೀರಿನಲ್ಲಿ ಸೊಳ್ಳೆಗಳ ಲಾರ್ವಾ ಪತ್ತೆಯಾಗಿದೆ ಎಂದರು.
ಮನೆಯ ಅಕ್ಕ-ಪಕ್ಕ ನೀರು ನಿಲ್ಲದಂತೆ ಜನರಲ್ಲಿ ಅರಿವು ಮೂಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಫ್ರಿಡ್ಜ್, ಟ್ಯಾಂಕ್, ತೊಟ್ಟಿ ಸೇರಿದಂತೆ ಹಲವು ಸಾಮಗ್ರಿಗಳನ್ನು ಶುಚಿಯಾಗಿಟ್ಟುಕೊಳ್ಳುವ ಬಗ್ಗೆ ಹಾಗೂ ಸೊಳ್ಳೆ ನಿರ್ಮೂಲನೆ ಮಾಡಲು ಗ್ರಾಮದಲ್ಲಿ ಅರಿವು ಕಾರ್ಯ ಆರಂಭಿಸಿದ್ದು, ತುಂಬಾ ದಿನ ನೀರು ನಿಲ್ಲದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಡೆಂಗ್ಯೂ ಪೀಡಿತ ರೋಗಿಗಳಲ್ಲಿ ಜ್ವರ, ಕಣ್ಣಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳಲಿದೆ. ಹಳ್ಳಿಗಳಲ್ಲಿ ರಕ್ತ ಪರೀಕ್ಷೆ ಮೂಲಕ ಡೆಂಗ್ಯೂ ಪತ್ತೆ ಕಾರ್ಯ ಮಾಡಲಾಗುತ್ತಿದೆ. ಡೆಂಗ್ಯೂ ನಿರ್ಮೂಲನೆಗೆ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು.
ಡೆಂಗ್ಯೂ ಹತೋಟಿಗೆ ತರಲು ಮಂಡ್ಯ ಆರೋಗ್ಯ ಇಲಾಖೆ ಭಾರೀ ಮುನ್ನೆಚ್ಚರಿಕೆ ವಹಿಸುತ್ತಿದ್ದು, ಜನತೆ ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಮಾರಣಾಂತಿಕ ಡೆಂಗ್ಯೂ ತಡೆಗಟ್ಟಲು ಎಲ್ಲರೂ ಸಜ್ಜಾಗಿ ನಿಂತಿದ್ದಾರೆ.





