ಮಂಡ್ಯ : ಇದೇ ಜೂನ್ 7 ರಂದು ಜಿಲ್ಲೆಯಲ್ಲಿ ಆಚರಿಸಲಾಗುವ ಬಕ್ರೀದ್ ಹಬ್ಬವನ್ನು ಸೌಹಾರ್ದತೆಯಿಂದ ಶಾಂತಿಯುತವಾಗಿ ಆಚರಿಸಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಧರ್ಮಗಳ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಎಲ್ಲಾ ಧರ್ಮಗಳನ್ನು ಗೌರವಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿರುತ್ತದೆ ಎಂದರು.
ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಪ್ರತೀಕ. ಈ ಹಬ್ಬದಲ್ಲಿ ಅಥವಾ ಯಾವದೇ ಸಮಯದಲ್ಲಿ ಕಿಡಿಗೇಡಿಗಳು ಅಹಿತಕರವಾಗಿ ಶಾಂತಿ ಕದಡುವ ಕೆಲಸ ಮಾಡಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬಕ್ರೀದ್ ಹಬ್ಬದ ಅಂಗವಾಗಿ ಮೆರವಣಿಗೆ ಅಥವಾ ಇನ್ನಿತರೆ ಕಾರ್ಯಕ್ರಮ ನಡೆಸುವ ಸಂದರ್ಭದಲ್ಲಿ ಮೊದಲೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಹಿತಿ ನೀಡಿ. ಇದರಿಂದ ಪೊಲೀಸ್ ಇಲಾಖೆ ಅವರು ಸೂಕ್ತ ಬಂದೋಬಸ್ತ್ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇದರೊಂದಿಗೆ ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ಯ ಕಡ್ಡಾಯವಾಗಿ ಪಾಲಿಸಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಬಕ್ರೀದ್ ಹಬ್ಬದ ಆಚರಣೆ ಸಂಬಂಧವಾಗಿ ತಾಲ್ಲೂಕು ಮಟ್ಟದಲ್ಲಿ ಈಗಾಗಲೇ ಶಾಂತಿ ಸಭೆಯನ್ನು ನಡೆಸಲಾಗಿದೆ. ಪೊಲೀಸ್ ಇಲಾಖೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಪೊಲೀಸ್ ನಿಯೋಜನೆಗೆ ಯೋಜನೆ ರೂಪಿಸಿದೆ. 3 ಕೆ.ಎಸ್. ಆರ್.ಪಿ ಹಾಗೂ 200 ಕ್ಕೂ ಹೆಚ್ಚಿನ ಹೋಮ್ ಗಾಡ್೯ಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಣ್ಣ ಘಟನೆಯಿಂದ ಪ್ರಾರಂಭವಾಗಿ ಗಲಭೆ ಯಾಗುತ್ತದೆ ಸಣ್ಣ ಅಹಿತಕರ ಘಟನೆ ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ ಎಂದರು.
ಸಾಮಾಜಿಕ ಮಾಧ್ಯಮದಲ್ಲಿ ಶಾಂತಿ ಕದಡುವ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಹಿತಕರ ಪೋಸ್ಟ್ ಗಳ ಬಗ್ಗೆ ನಿಗಾ ವಹಿಸಲು ಪೊಲೀಸ್ ಇಲಾಖೆಯಲ್ಲಿ ಸೋಷಿಯಲ್ ಮೀಡಿಯಾ ಸೆಲ್ ಕೆಲಸ ನಿರ್ವಹಿಸುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಮಂಡ್ಯ ಡಿವೈಎಸ್ ಪಿ ಲಕ್ಷ್ಮಿ ನಾರಾಯಣ ಪ್ರಸಾದ್, ನಾಗಮಂಗಲ ಡಿವೈಎಸ್ ಪಿ ಚಲುವರಾಜು, ಶ್ರೀರಂಗಪಟ್ಟಣ ಡಿವೈಎಸ್ ಪಿ ಶಾಂತಮಲ್ಲಪ್ಪ ಉಪಸ್ಥಿತರಿದ್ದರು.





