ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಇಂದು (ಏ.೪) ಉಮೇದುವಾರಿಕೆ ಸಲ್ಲಿಸಿದರು.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡ್ಯದ ಜನರಿಂದ ನನಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ನನಗೆ ರಾಜಕೀಯವಾಗಿ ಶಕ್ತಿ ನೀಡಿದ್ದು ಮಂಡ್ಯ ಜನತೆ. ನಾನು ಅಂದಿನಿಂದಲೂ ರೈತರ ಪರವಾಗಿಯೇ ಕೆಲಸ ಮಾಡಿದ್ದೇನೆ ಅವರು ನನ್ನ ಕೈ ಬಿಡುವುದಿಲ್ಲ ಎಂದು ಎಚ್‌ಡಿಕೆ ಭಾವುಕರಾಗಿದ್ದಾರೆ.
ಈ ಹಿಂದೆ ನಾನು, ಬಿ.ಎಸ್ ಯಡಿಯೂರಪ್ಪ ಮೈತ್ರಿ ಸರ್ಕಾರದಿಂದ ಉತ್ತಮ ಆಡಳಿತ ನೀಡಿದ್ದೆವು. ಒಳ್ಳೆಯ ಆಡಳಿತದಿಂದ ಜನರ ಗಮನ ಸೆಳೆದಿದ್ದೇವು. ಆಗ ಸಿಕ್ಕಂತೆ ಈಗಲೂ ಜನರಿಂದ ನನಗೆ ಅಭೂತಪೂರ್ವ ಬೆಂಬಲ ನನಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು ನನ್ನ ಗುರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇನ್ನು ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್ ಪಾತ್ರ ದೊಡ್ಡದಿದೆ. ನಮ್ಮನ್ನು ದೆಹಲಿಗೆ ಕರೆದುಕೊಂಡು ಹೋಗಿ ಮೈತ್ರಿ ಮಾಡಿಸುವಲ್ಲಿ ಅವರ ಪಾತ್ರ ಬಹು ದೊಡ್ಡದು. ಇಂದು ಅವರೇ ಖುದ್ದು ಮಂಡ್ಯಕ್ಕೆ ಬಂದಿದ್ದಾರೆ. ಹಾಗೆಯೇ ಮಂಡ್ಯ ನನ್ನ ತವರು ಮನೆ ಎಂದು ಬಿಎಸ್‌ವ ಹೇಳಿದ್ದು ಸಂತಸ ತಂದಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.





