ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿಗಳು ಮೂರು ತಿಂಗಳೊಳಗೆ ಪೂರ್ಣವಾಗಲಿದೆ ಎಂದು ಸಚಿವ ಡಾ ಶರಣ್ ಪ್ರಕಾಶ್ ಆರ್. ಪಾಟೀಲ್ ತಿಳಿಸಿದರು.
ಬುಧುವಾರ ನಗರದ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಅಧಿಕಾರಿಗಳು ಹಾಗೂ ವೈಧ್ಯರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕ್ಯಾನ್ಸರ್ ಆಸ್ಪತ್ರೆಯ ಸಿವಿಲ್ ಕಾಮಗಾರಿಗಳು ಒಂದು ತಿಂಗಳೊಳಗೆ ಪೂರ್ಣಗೊಳಿಸವೇಕು. ಆಸ್ಪತ್ರೆಗೆ ಅವಶ್ಯಕವಿರುವ ವೈದ್ಯಕೀಯ ಉಪಕರಣಗಳು ಹಾಗೂ ಇನ್ನಿತರೆ ಟೇಬಲ್, ಚೇರ್, ಬೆಡ್ ವಿದ್ಯುತ್ ಸಂಪರ್ಕ ಇತ್ಯಾದಿ ಕೆಲಸಗಳು 3 ತಿಂಗಳೊಳಗೆ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.
ಆಸ್ಪತ್ರೆಗೆ ಬೇಕಿರುವ ವೈದ್ಯರು ಹಾಗೂ ಇನ್ನಿತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆದು ಕಾರ್ಯಪ್ರವೃತ್ತರಾಗಬೇಕು. ಎಂ.ಆರ್.ಐ ಹಾಗೂ ಸಿ.ಟಿ ಸ್ಕ್ಯಾನ್ ಆದ ನಂತರ ರೋಗಿಗಳ ವರದಿ ನೀಡಲು ಮೂರ ರಿಂದ ಐದು ದಿನ ಆಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೊರ ಗುತ್ತಿಗೆ ಮೇಲೆ ಲ್ಯಾಬ್ ಸೇವೆ ಒದಗಿಸುತ್ತಿರುವ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೆಚ್ಚಿನ ದರ ವಿದಿಸುತ್ತಿದ್ದಾರೆ ಎಂದು ದೂರು ಕೇಳಿ ಬರುತ್ತಿದ್ದು, ಇದನ್ನು ಪರಿಶೀಲಿಸಿ ತಪ್ಪು ಕಂಡು ಬಂದಲ್ಲಿ ಟೆಂಡರ್ ರದ್ದುಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಪಿ.ರವಿಕುಮಾರ್ ಮಾತನಾಡಿ, ಬಿ.ಹೊಸೂರಿನಲ್ಲಿ ನರ್ಸಿಂಗ್, ಪ್ಯಾರ್ ಮೆಡಿಕಲ್ ಕಾಲೇಜು ಮತ್ತು ಹಾಸ್ಟಲ್ ಗೆ ಸ್ಥಳದ ವ್ಯವಸ್ಥೆ ಮಾಡಿಕೊಡಲಾಗುವುದು. ಇದಕ್ಕೆ ಯೋಜನೆ ರೂಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ವರ್ಚುಯಲ್ ಡಿಸೆಕ್ಸನ್ ಟೇಬಲ್ ಗೆ ಚಾಲನೆ: ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2.50 ಕೋಟಿ ರೂ ವೆಚ್ಚದಲ್ಲಿ ಖರೀದಿಸಲಾಗಿರುವ ಅನಾಟಮಿ ವರ್ಚುಯಲ್ ಡಿಸೆಕ್ಸನ್ ಟೇಬಲ್ (Anatomy virtual dissection table) ಗೆ ಸಚಿವರು ಚಾಲನೆ ನೀಡಿದರು.
ಸಭೆಯ ನಂತರ ಸಚಿವರು ಮಿಮ್ಸ್ ಆಸ್ಪತ್ರೆಯ ವಾಡ್೯ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರಾದ ಎ ಬಿ ರಮೇಶ್ ಬಂಡಿಸಿದ್ದೇಗೌಡ,ವಿಧಾನ ಪರಿಷತ್ ಶಾಸಕರಾದ ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ ಕುಮಾರ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ: ಸುಜತಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.





