ಮಂಡ್ಯ: ಜಿಲ್ಲೆಯ ಉದ್ಯನವನಗಳ ಅಭಿವೃದ್ಧಿಗಾಗಿ ಸರ್ಕಾರದಿಂದ 2 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ನಗರದ ಕೆಂಪೇಗೌಡರ ಉದ್ಯನವನವನ್ನು ಅಭಿವೃದ್ಧಿ ಪಡಿಸಿ ಮುಂದಿನ ವರ್ಷದೊಳಗೆ ಉದ್ಘಾಟನೆಗೆ ಸಿದ್ಧಪಡಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.
ಭಾನುವಾರ(ಜೂ.30) ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕೆಂಪೇಗೌಡರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿಗೆ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಚಿಂತಿಸುತ್ತಿದ್ದು, ಮಂಡ್ಯ ಅಥವಾ ಮದ್ದೂರು ಭಾಗದಲ್ಲಿ ಉತ್ತಮ ಸ್ಥಳವನ್ನು ಗುರುತಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಜೊತೆಗೆ ಈ ಬಗ್ಗೆ ಕೇಂದ್ರ ಸಚಿವರೊಂದಿಗೂ ಚರ್ಚಿಸಲಾಗುವುದು ಎಂದರು.
ನಾಡಪ್ರಭು ಕೆಂಪೇಗೌಡರ ದೂರ ದೃಷ್ಟಿ ಮಹತ್ವದಾದದ್ದು, ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸ್ಥಳ ಬೇಕಿತ್ತು, ಆವಾಗ ಕೆಂಪೇಗೌಡರು ಬೆಂಗಳೂರಿನಲ್ಲಿ ವ್ಯಾಪರಕ್ಕೆ ಸ್ಥಳ ನಿಗದಿಪಡಿಸಿ ಉತ್ತಮ ಪೇಟೆಗಳನ್ನು ನಿರ್ಮಾಣ ಮಾಡಿದರು. ಸಮುದ್ರಕ್ಕಿಂತ 3500 ಅಡಿ ಎತ್ತರದಲ್ಲಿದ್ದ ಬೆಂಗಳೂರನ್ನು ರಾಜಧಾನಿಯಾಗಿ ಆಯ್ಕೆ ಮಾಡಿ ಹಲವಾರು ಸೌಲಭ್ಯಗಳನ್ನು ಒದಗಿಸಿ ಲಕ್ಷಾಂತರ ಜನರು ಜೀವನ ನಡೆಸುವ ರೀತಿ ಬೆಂಗಳೂರನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು.