ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಬೃಂದಾವನ ಉದ್ಯಾನವನದಲ್ಲಿ ಅಧಿಕಾರಿಗಳು ಸಂಗೀತ ಕಚೇರಿ ನಡೆಸುವ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಗೌರವ ತೋರಿದ್ದಾರೆ.
ಭಾರತ ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಜಗತ್ತಿನಾದ್ಯಂತ ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಾಗೆಯೇ ದೇಶದಾದ್ಯಂತ ಶೋಕಾಚರಣೆ ಆಚರಿಸಲಿದ್ದು, ರಾಜ್ಯದಲ್ಲಿಯೂ 7 ದಿನಗಳವರೆಗೆ ಶೋಕಾಚರಣೆ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ದೇಶಾದ್ಯಂತ 7 ದಿನ ಶೋಕಾಚರಣೆ ಇದ್ದರೂ ಕಾವೇರಿ ನಿಗಮದ ಅಧಿಕಾರಿಗಳು ಕೆಆರ್‌ಎಸ್ ಬೃಂದಾವನದಲ್ಲಿ ಮೋಜು ಮಸ್ತಿ ಮಾಡುವ ಮೂಲಕ ಸಂಗೀತ ಕಚೇರಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.
ಪ್ರತಿನಿತ್ಯ ಸಂಜೆ 7 ರಿಂದ 8ರವರೆಗೆ ಕೆಆರ್‌ಎಸ್ ಬೃಂದಾವನ ಉದ್ಯಾನವನದಲ್ಲಿ ಸಂಗೀತ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರಧಾನಿ ನಿಧನದ ನಡುವೆಯು ಎಂದಿನಂತೆ ಅಧಿಕಾರಿಗಳು ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಈ ಬಗ್ಗೆ ಕೆಲ ಸ್ಥಳಿಯರು ಹಾಗೂ ಅಲ್ಲಿನ ಪ್ರವಾಸಿಗರು ಪ್ರಶ್ನೆ ಕೇಳಿದ ನಂತರ ಎಚ್ಚೆತ್ತ ಅಧಿಕಾರಿಗಳು ಸಂಗೀತ ಕಾರಂಜಿ ಸ್ಥಗಿತಗೊಳಿಸಿ ಪ್ರವಾಸಿಗರನ್ನು ಅಲ್ಲಿಂದ ಕಳುಹಿಸಿದ್ದಾರೆ.





