ಹಲಗೂರು : ಪಟ್ಟಣದ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯ ಆವರಣದಲ್ಲಿ ಶುಕ್ರವಾರ ತಡ ರಾತ್ರಿ ಅಪರಿಚಿತರು ವ್ಯಕ್ತಿಯೊಬ್ಬರ ತಲೆ ಮೇಲೆ ದಿಂಡುಗಲ್ಲನ್ನು ಎತ್ತಿ ಹಾಕಿ ಭೀಕರವಾಗಿ ಕೊಲೆಗೈದಿರುವ ಘಟನೆ ನಡೆದಿದೆ.
ಮೃತನನ್ನು ಮೈಸೂರಿನ ಕುವೆಂಪು ನಗರದ ನಿವಾಸಿ ರಂಗಸ್ವಾಮಿ ಎಂಬವರ ಮಗ ರಮೇಶ್(೩೧) ಎಂದು ಗುರುತಿಸಲಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಮನೆಯಲ್ಲಿ ಜಗಳ ಮಾಡಿಕೊಂಡು ಮನೆಬಿಟ್ಟು ಹಲಗೂರಿನಲ್ಲಿ ಸಂಬಂಧಿಕನ ಜೊತೆ ಗಾರೆ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ನಂತರದ ಮೂರು-ನಾಲ್ಕು ವರ್ಷಗಳಿಂದ ಚಿಂದಿ ಹಾಗೂ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.
ಘಟನೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ದಿಂಡುಗಲ್ಲಿನಿಂದ ತಲೆಗೆ ಹೊಡೆದು ರಮೇಶ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮಾಹಿತಿ ದೊರೆತ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ಕೃಷ್ಣಪ್ಪ, ಹಲಗೂರು ವೃತ್ತ ನಿರೀಕ್ಷಕ ಶ್ರೀಧರ್, ಕೆ.ಎಂ.ದೊಡ್ಡಿ ವೃತ್ತ ನಿರೀಕ್ಷಕ ಆನಂದ್, ಶ್ವಾನದಳ ಹಾಗೂ ಬೆರಳಚ್ಚು ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸ್ಥಳದಿಂದ ಸಾಕ್ಷ್ಯ, ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯ ಪಿಎಸ್‌ಐ ಲೋಕೇಶ್ ಹಾಗೂ ಬೆಳಕವಾಡಿ ಠಾಣೆಯ ಪಿಎಸ್‌ಐ ಪ್ರಕಾಶ್ ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.





