Mysore
22
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ರೂಪಿಸಿ : ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರದ ಹಲವಾರು ಕಾರ್ಯಕ್ರಮಗಳಿವೆ. ಅಧಿಕಾರಿಗಳು ಚಿಂತನೆ ನಡೆಸಿ ಹೊಸ ಯೋಜನೆಗಳು ರೂಪಿಸಿ ಎಂದು ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ‌ ಹೆಚ್.ಡಿ ಕುಮಾರಸ್ವಾಮಿ  ತಿಳಿಸಿದರು.

ಅವರು ಶನಿವಾರ ತಡರಾತ್ರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಅನುದಾನ ಸಮರ್ಪಕ ಬಳಕೆಯಾಗಬೇಕು ಇಲಾಖೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಹಣ ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ ಅಧಿಕಾರಿಗಳು ಬಳಕೆ ಮಾಡಬೇಕು. ಅನುದಾನ ಬಿಡುಗಡೆಯಾಗಿ ಬಳಕೆಯಾಗದಿರುವ ಪ್ರಕರಣಗಳನ್ನು ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ನೋಡಿದ್ದೇನೆ. ಸಮರ್ಪಕ ಅನುದಾನದ ಬಳಕೆ ಕೂಡ ಜಿಲ್ಲೆಯ ಅಭಿವೃದ್ಧಿಯ ಸಂಕೇತ ಎಂದರು.

ಸಾರ್ವಜನಿಕರಿಗೆ ಸ್ಪಂದಿಸಿ‌ ಅಭಿವೃದ್ಧಿಗೆ ಸಹಕರಿಸಿ ಮಂಡ್ಯ ಜಿಲ್ಲೆಯಲ್ಲಿ ರೈತರ ಸಂಖ್ಯೆ ಹೆಚ್ಚು, ಅವರ ಕಷ್ಟಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿ. ಜಿಲ್ಲೆಯಲ್ಲಿ ಹಲವಾರು ಸಂಪನ್ಮೂಲಗಳಿವೆ ಆದರೂ ಬೇರೆ ಜಿಲ್ಲೆಗೆ ಹೋಲಿಸಿದರೆ ಮಂಡ್ಯ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ. ಯಾವುದೇ ಒತ್ತಡಗಳಿಗೆ ಮಣಿಯಬೇಡಿ ಕಾನೂನುಬದ್ಧವಾಗಿ ಕೆಲಸನಿರ್ವಹಿಸಿ ಎಂದು ಸೂಚಿಸಿದರು.

ಸಿ.ಎಸ್.ಆರ್ ಅನುದಾನದ ಮೂಲಕ ಅಧಿಕಾರಿಗಳು ಚುರುಕಾಗಿ ಹೊಸ ಯೋಚನೆಗಳನ್ನು ಜಾರಿಗೆ ತನ್ನಿ, ಮಾದರಿ ಶಾಲೆ, ಕಾಲೇಜು, ಆಸ್ಪತ್ರೆ, ಕ್ರೀಡಾಂಗಣ ನಿರ್ಮಾಣ ಕುರಿತು ಯೋಜನೆ ಸಿದ್ಧ ಪಡಿಸಿ, ಕೇಂದ್ರ ಸರ್ಕಾರ ಅಥವಾ ಸಿ.ಎಸ್.ಆರ್ ಅನುದಾನದ ಮೂಲಕ  ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸೋಣ. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ ಎಂದರು.

ಜಿಲ್ಲಾಧಿಕಾರಿ ಡಾ: ಕುಮಾರ ಅವರು ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳು, ಕೆ.ಆರ್.ಎಸ್ ಅಣೆಕಟ್ಟಿನಲ್ಲಿ ಇರುವ ನೀರಿನ ಮಟ್ಟ, ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಅನುಸರಿಸುವ ಕ್ರಮ, ಜಿಲ್ಲೆಯಲ್ಲಿರುವ ಕೈಗಾರಿಕೆಗಳ ಮಾಹಿತಿಯನ್ನು ಸಚಿವರಿಗೆ ನೀಡಿದರು.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಯೋಜನೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಇದಲ್ಲದೇ ಮನ್ ಮುಲ್ ನಿಂದ ನ್ಯಾಷನಲ್ ಪ್ರೊಗ್ರಾಮ್‌ ಫಾರ್ ಡೈರಿ ಡೆವಲಪ್ಮೆಂಟ್ ಯೋಜನೆಯಡಿ ಮೂರು ಯೋಜನೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೇಂದ್ರ ಸಚಿವರ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮನರೇಗಾ, ಸ್ವಚ್ಛ ಭಾರತ್ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಪ್ರಧಾನಮಂತ್ರಿ ಆವಸ್ ಯೋಜನೆಯಲ್ಲಿ ಜಿಲ್ಲೆಯ ಪ್ರಗತಿಯ ಬಗ್ಗೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಈ ಬಾರಿ ಪ್ರಧಾನ ಮಂತ್ರಿ ಆವಸ್ ಯೋಜನೆಯಡಿ ಹೆಚ್ಚಿನ ಗುರಿ ನಿಗಧಿಯಾಗಲಿದೆ. ಇದಕ್ಕೆ ಇಂದಿನಿಂದಲೇ ಸಿದ್ಧತೆ ಪ್ರಾರಂಭಿಸಿ ಎಂದರು.

ಸಭೆಯಲ್ಲಿ ಕೆ.ಆರ್.ಪೇಟೆ ಶಾಸಕರಾದ ಹೆಚ್.ಟಿ ಮಂಜು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜ್, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಸಂಜೀವಪ್ಪ, ನಿವೃತ್ತ ಐ.ಎ.ಎಸ್ ಅಧಿಕಾರಿ ಕೃಷ್ಣಯ್ಯ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags: