Mysore
15
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಮಂಡ್ಯದಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್‌ ಭೇಟಿ ರದ್ದು

ಮಂಡ್ಯಕೆ.ಆರ್‌.ಪೇಟೆ ತಾಲೂಕು ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಭೇಟಿ ರದ್ದಾಗಿದೆ.

ಅ.13ರಿಂದ ಆರಂಭಗೊಂಡಿರುವ ಮಹಾಕುಂಭ ಮೇಳದ ಕಡೆಯ ದಿನವಾದ ಅ.16ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭೇಟಿ ನಿಗದಿಯಾಗಿತ್ತು. ಮಂಡ್ಯ ಜಿಲ್ಲಾಡಳಿತದ ಪರವಾಗಿ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡರು ಯೋಗಿ ಅದಿತ್ಯನಾಥ್‌ ಅವರನ್ನು ಆಹ್ವಾನಿಸಿದ್ದರು. ಆದರೆ, ಕಳೆದೆರಡು ದಿನಗಳಿಂದ ಉತ್ತರ ಪ್ರದೇಶದಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ತಾವು ಕುಂಭಮೇಳಕ್ಕಾಗಿ ಕರ್ನಾಟಕಕ್ಕೆ ಬರಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಯೋಗಿ ಆದಿತ್ಯನಾಥ್‌ ಪತ್ರ ಬರೆದಿದ್ದಾರೆ. ಶುಕ್ರವಾರವೇ ಯೋಗಿ ಆದಿತ್ಯನಾಥ್‌ ಕುಂಭಮೇಳಕ್ಕೆ ಬರುವುದಿಲ್ಲವೆಂಬ ಸುದ್ದಿ ಹರಿದಾಡಿತ್ತು. ಶನಿವಾರ ಖಚಿತವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಂಭಮೇಳದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಬೆಂಗಳೂರಿನಿಂದ ಕಾಪ್ಟರ್‌ನಲ್ಲಿ ಹೊರಟು, 10.50ಕ್ಕೆ ಅಂಬಿಗರಹಳ್ಳಿಯಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಅಲ್ಲಿ ಪೊಲೀಸರಿಂದ ಗೌರವ ರಕ್ಷೆ ಸ್ವೀಕರಿಸಿ, ನೂತನವಾಗಿ ನಿರ್ಮಿಸಿರುವ ಶ್ರೀಮಲೆ ಮಹದೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವರು. ಬಳಿಕ ವೇದಿಕೆ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2ಕ್ಕೆ ಅಂಬಿಗರ ಹಳ್ಳಿಯಿಂದ ನಿರ್ಗಮಿಸಲಿದ್ದಾರೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಕ್ಷೇತ್ರದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹಾವೇರಿಯ ಕಾಗಿನಲೆ ಕನಕಗುರು ಪೀಠದ ಶ್ರೀನಿರಂಜನಾನಂದಪುರಿ ಸ್ವಾಮೀಜಿ, ಚಂದ್ರವನ ಆಶ್ರಮದ ಡಾ.ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಡಾ.ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀರವಿಶಂಕರ್‌ ಗುರೂಜಿ, ಗುಜರಾತ್‌ನ ಹಿಂದೂ ಧರ್ಮ ಆಚಾರ್ಯ ಸಭಾದ ಶ್ರೀಪರಮಾತ್ಮಾನಂದ ಸರಸ್ವರಿ ಸ್ವಾಮೀಜಿ ಸಾನಿಧ್ಯ ವಹಿಸುವರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!