ಮಂಡ್ಯ: ‘ಆತಿಥ್ಯ’ದ ನೆಲವೆಂಬ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಎಲ್ಲರ ಒಗ್ಗಟ್ಟು ಹಾಗೂ ಶ್ರಮ ಅಗತ್ಯವೆಂದು ವಿಧಾನ ಪರಿಷತ್ ಸದಸ್ಯ ಹಾಗೂ ಸಮ್ಮೇಳನ ಮಾಧ್ಯಮ ಸಮನ್ವಯ ಸಮಿತಿ ಅಧ್ಯಕ್ಷ ದಿನೇಶ್ ಗೂಳಿಗೌಡ ಅವರು ಅಭಿಪ್ರಾಯಪಟ್ಟರು.
ನಗರದ ಹೊರ ವಲಯದಲ್ಲಿರುವ ಅಮರಾವತಿ ಹೋಟೇಲ್ ನಲ್ಲಿ ಆಯೋಜನೆಗೊಂಡಿದ್ದ ಮಾಧ್ಯಮ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಡ ಭಾಷೆ ಕನ್ನಡದ ಹಬ್ಬ ಜಿಲ್ಲೆಯಲ್ಲಿ ಮೂರನೇ ಬಾರಿಗೆ ಆಯೋಜನೆಗೊಳ್ಳುತ್ತಿರುವುದು ನಮ್ಮೆಲ್ಲರಿಗೂ ಸಂತಸದ ವಿಚಾರ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ಹರಡಬೇಕು. ಆ ಮೂಲಕ ಮಂಡ್ಯ ಜಿಲ್ಲೆಯ ಸೊಗಡು ವಿಶ್ವವ್ಯಾಪಿ ಪಸರಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಮಂಡ್ಯ ಎಂದರೆ ಇಂಡಿಯಾ ಎಂದು ಸಂಬೋಧಿಸುತ್ತಾರೆ, ಆ ಅನ್ವರ್ಥ ಪದಕ್ಕೆ ಅರ್ಥ ಬರುವಂತೆ ಜಿಲ್ಲೆಯ ಎಲ್ಲ ಸ್ಥರದ ಜನತೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತಾಗಬೇಕು. ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಸಾಹಿತಿಗಳು, ರೈತರು, ಶಿಕ್ಷಕರು ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಆ ಸಂಬಂಧ ಲೇಖನಗಳು ಪ್ರಕಟವಾಗಲಿ ಎಂದು ಸಲಹೆ ನೀಡಿದರು.
ಸಮ್ಮೇಳನದ ಸಾರ್ಥಕತೆಯನ್ನು ಎತ್ತಿ ಹಿಡಿಯುವ ಸಾಹಿತ್ಯ ಲೇಖನಗಳು ಪ್ರಕಟಗೊಳ್ಳಬೇಕು. ಹೊರ ಜಿಲ್ಲೆ ರಾಜ್ಯದಿಂದ ಆಗಮಿಸುವ ಪತ್ರಕರ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು. ಸಮ್ಮೇಳನ ಯಶಸ್ಸಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ನಾಡಿನ ಲೇಖಕರ ಸಂದೇಶಗಳನ್ನು ಓದುಗರಿಗೆ ತಲುಪಿಸಬೇಕೆಂದರು.
ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ಮಾಧ್ಯಮದ ಪಾತ್ರ ಅಪಾರ, ಸಮ್ಮೇಳನದ ಪ್ರತಿ ಚಟುವಟಿಕೆಗಳ ಸಮಗ್ರ ಪ್ರಚಾರ ಹಾಗೂ ಲೋಪದೋಷಗಳ ಪರಿಹಾರಕ್ಕೆ ಜಾಗೃತಿ, ಶುಚಿತ್ವಕ್ಕೆ ಆದ್ಯತೆ ಸೇರಿದಂತೆ ಎಲ್ಲರ ಸಹಕಾರದಿಂದ ಸಮ್ಮೇಳನ ಯಶಸ್ಸಿಗೆ ಮುಂದಾಗೋಣ ಎಂದು ಕರೆ ನೀಡಿದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಮಾತನಾಡಿ, ಮುಖ್ಯ ವೇದಿಕೆಯ ಸನಿಹದಲ್ಲೇ ಪತ್ರಕರ್ತರ ಗ್ಯಾಲರಿ ಹಾಗೂ ವಿದ್ಯುನ್ಮಾನ ಸುದ್ದಿಗಾರರ ವಾಹನಗಳ ತಂಗುದಾಣ, ಕಂಪ್ಯೂಟರ್ ವ್ಯವಸ್ಥೆ, ಇಂಟರ್ನೆಟ್ ಹಾಗೂ ಜನರೇಟರ್ ಸೌಲಭ್ಯ ಹಾಗೂ ಅತಿ ಗಣ್ಯರ ಪತ್ರಿಕಾಗೋಷ್ಠಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಮಾಧ್ಯಮ ಸಮನ್ವಯ ಸಮಿತಿಯ ಸಂಚಾಲಕ ಅಶೋಕ್ ಜಯರಾಂ ಅವರು ಮಾತನಾಡಿ, ಸಮ್ಮೇಳನ ಯಶಸ್ವಿಗೊಳಿಸುವುದು ನಮ್ಮೆಲ್ಲರ ಭಾಗ್ಯ, ಆ ನಿಟ್ಟಿನಲ್ಲಿ ಒಂದಾಗಿ ಶ್ರಮಿಸೋಣ, ಹಬ್ಬದ ವಾತಾವರಣ ನಿರ್ಮಿಸಿ ಮಂಡ್ಯ ಜಿಲ್ಲೆಯ ಕಂಪು ರಾಜ್ಯ ಹಾಗೂ ರಾಷ್ಟ್ರ ವ್ಯಾಪಿ ಪಸರಿಸಲು ಶ್ರಮಿಸೋಣವೆಂದರು.
ಪತ್ರಕರ್ತ ಸಿದ್ದು ಆರ್.ಜಿ.ಹಳ್ಳಿ ಮಾತನಾಡಿ, ನೆಟ್ವರ್ಕ್ ಕಿರಿಕಿರಿ ಮಾರ್ಗೋಪಾಯ ಕಂಡುಕೊಳ್ಳಬೇಕು. ಸಮ್ಮೇಳನಕ್ಕೆ ಆಗಮಿಸುವ ಪತ್ರಕರ್ತರ ಸಂಖ್ಯೆಯನ್ನು ಅಖೈರುಗೊಳಿಸಿಕೊಳ್ಳಲು, ಅಧಿಕೃತ ಮಾಧ್ಯಮ ಸಂಸ್ಥೆಯ ಜೊತೆ ಪತ್ರ ವ್ಯವಹಾರ ನಡೆಸಬೇಕು. ವಿದ್ಯುತ್ ಸಂಪರ್ಕ ಸುಲಲಿತವಾಗಿರುವಂತೆ, ಟೆಕ್ನಿಸಿಯನ್ ನೇಮಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪತ್ರಕರ್ತ ಶಶಿಕುಮಾರ್ ಅವರು ಮಾತನಾಡಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಮಾರೋ ಸಮಾರಂಭದಲ್ಲಿ ವಿವಿಧ ಮಾಧ್ಯಮಗಳು ಒಟ್ಟಿಗೆ ಸುದ್ದಿ ಕಳುಹಿಸಲು ಕಾರ್ಯಪ್ರವೃತ್ತರಾಗುತ್ತಾರೆ. ಈ ಸಮಯದಲ್ಲಿ ತೊಂದರೆಯಾಗದಂತೆ 2 ಅಥವಾ 3 ಸಂಸ್ಥೆಗಳಿಂದ ಇಂಟರ್ ನೆಟ್ ಸೇವೆ ಪಡೆದುಕೊಳ್ಳುವುದು ಉತ್ತಮ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಆನಂದ್ ಮಾತನಾಡಿ, ಅನಧಿಕೃತ ಪತ್ರಕರ್ತರ ಕಡಿವಾಣಕ್ಕೆ ಯೋಜನೆ ರೂಪಿಸಬೇಕು. ಉತ್ತಮ ಗುಣಮಟ್ಟದ ಸೋಷಿಯಲ್ ಮೀಡಿಯಾ ಬಳಕೆಗೂ ಒತ್ತು ನೀಡಬೇಕೆಂದರು.
ಭೂ ದಾಖಲೆಗಳ ಉಪ ನಿರ್ದೇಶಕಿ ಮಮತಾ ಮಾತನಾಡಿ, ವಿವಿಧ ಕಂಪನಿಗಳ ಇಂಟರ್ ನೆಟ್ ವ್ಯವಸ್ಥೆ ಸುಲಲಿತ ವಿದ್ಯುತ್ ಸರಬರಾಜಿನ ಸರ್ಕ್ಯೂಟ್ ವ್ಯವಸ್ಥೆ ಜೊತೆಗೆ ಜಾಗೃತಿ ಫಲಕ ಅಳವಡಿಸಲು ಸಲಹೆ ನೀಡಿದರು.
ಪತ್ರಕರ್ತ ರಾಘವೇಂದ್ರ ಮಾತನಾಡಿ, ಕೆಲವು ಸ್ವಾರ್ಥಿಗಳು ಸಮ್ಮೇಳನ ಯಶಸ್ವಿಗೆ ಭಂಗ ತರಲು ಊಹಪೋಹಗಳನ್ನು ಹರಿದು ಬಿಡುತ್ತಾರೆ. ಅವುಗಳ ಪ್ರಚಾರ ಆದ್ಯತೆ ನೀಡದೇ ಸೂಕ್ತ ಸಮಜಾಯಿಸಿ ಪಡೆದು ಸುದ್ದಿಗಳನ್ನು ಪ್ರಕಟಿಸಲು ಒತ್ತು ನೀಡೋಣ ಎಂದು ಕರೆ ನೀಡಿದರು.
ಪತ್ರಕರ್ತ ಕೆ.ಸಿ.ಮಂಜುನಾಥ್ ಮಾತನಾಡಿ, ಸಕ್ಕರೆ ನಗರಿ ಮಂಡ್ಯದಲ್ಲಿ ಆಯೋಜನೆಗೊಳ್ಳುವ ಮೂರನೇ ಸಮ್ಮೇಳನ ಯಶಸ್ಸಿನಲ್ಲಿ ಮಾಧ್ಯಮದ ಪಾತ್ರ ಅಪಾರವಾಗಿದ್ದು, ಮೌಲ್ಯವಿಲ್ಲದ ಹಾಗೂ ಆವೇಶದ ಸುದ್ದಿಗಳಿಗೆ ಒತ್ತು ನೀಡದೇ, ಸಮ್ಮೇಳನದ ಗಾಂಭೀರ್ಯತೆಯನ್ನು ಎತ್ತಿ ಹಿಡಿಯುವ ಸುದ್ದಿಗಳ ಪತ್ರಕರ್ತರು ಪ್ರತಿ ವಿಭಾಗದ ಪತ್ರಕರ್ತರು ಸ್ಪಂದಿಸಬೇಕೆಂದರು.
ಪತ್ರಕರ್ತ ಶಿವಕುಮಾರ್ ಅವರು ಮಾತನಾಡಿ ವಿಶೇಷ ಲೇಖನಗಳನ್ನು ಸಿದ್ಧಪಡಿಸಿ ವಿವಿಧ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಣೆ, ವಿವಿಧ ಗಣ್ಯರ ವಿಡಿಯೋ ತುಣುಕುಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈಗಿನಿಂದಲೇ ಪ್ರಸಾರ ಮಾಡಿದರೆ ಹೆಚ್ಚಿನ ಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಾಧ್ಯ ಎಂದು ಪತ್ರಕರ್ತ ಶಿವಕುಮಾರ್ ಅವರು ತಿಳಿಸಿದರು.
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಸಮಿತಿಯ ಸದಸ್ಯರಾದ ಆಶಾಲತಾ ಪುಟ್ಟೇಗೌಡ, ಬಸವೇಗೌಡ, ಪ್ರವೀಣ್ ಕುಮಾರ್, ಶ್ರೀ ಹರ್ಷ, ಚೇತನ್, ಸುಬ್ರಹ್ಮಣ್ಯ ಬಾಬು, ಶಿವರಾಮು, ಅರಸಯ್ಯ ಸುಧಾಮ ಸೇರಿದಂತೆ ಗಣ್ಯರು ಸಲಹೆ ನೀಡಿದರು.