ಪಾಂಡವಪುರ : ತಾಲ್ಲೂಕಿನ ಚಿಕ್ಕಮರಳಿ ಗ್ರಾಮದ ಹೊರವಲಯದ ಪೂಜಾರಿ ಚನ್ನಪ್ಪ ಅವರಿಗೆ ಸೇರಿದ ತೋಟದಲ್ಲಿ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಚಿರತೆ ಸೆರೆಯಾಗಿದ್ದು, ತಿಂಗಳಲ್ಲಿ ಒಂದೇ ಸ್ಥಳದಲ್ಲಿ ಎರಡು ಚಿರತೆ ಸೆರೆ ಸಿಕ್ಕಂತಾಗಿದೆ.
ಕಳೆದ ಮೇ 6 ರಂದು ಇದೇ ಸ್ಥಳದಲ್ಲಿ ಚಿರತೆ ಸೆರೆಯಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಸೋಮವಾರ ಮತ್ತೊಂದು ಚಿರತೆ ಸೆರೆಯಾಗಿದೆ.
ಚಿಕ್ಕಮರಳಿ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಪದೇ ಪದೇ ಜಮೀನಿಗೆ ಹೋದ ರೈತರ ಕಣ್ಣಿಗೆ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದವು. ಚಿರತೆ ಕಾಣಿಸಿಕೊಳ್ಳುವ ವಿಷಯವನ್ನು ರೈತರು ಅರಣ್ಯಾಧಿಕಾರಿಗಳಿಗೆ ಮುಟ್ಟಿಸಿದ್ದರು. ವಿಷಯ ತಿಳಿದ ಅಧಿಕಾರಿಗಳು ಚಿಕ್ಕಮರಳಿ ಗ್ರಾಮದ ಹೊರವಲಯದ ನವಿಲು ಬೆಟ್ಟದ ತಪ್ಪಲ್ಲಿನಲ್ಲಿರುವ ಪೂಜಾರಿ ಚನ್ನಪ್ಪ ಎಂಬುವರಿಗೆ ಸೇರಿದ ತೋಟದಲ್ಲಿ ಬೋನು ಇರಿಸಿದ್ದರು. ಮೇ 6ರಂದು ಚಿರತೆ ಸೆರೆಯಾಯಿತು. ಅದಾದ ಬಳಿಕವೂ ಸಹ ಚಿರತೆಗಳು ಪ್ರತ್ಯಕ್ಷಗೊಂಡ ಹಿನ್ನೆಲೆಯಲ್ಲಿ ಮತ್ತೊಂದು ಬೋನನ್ನು ಅರಣ್ಯಾಧಿಕಾರಿಗಳು ಇರಿಸಿದ್ದರು.
ಆ ಬೋನಿಗೆ ಸೋಮವಾರ ಮುಂಜಾನೆ 5 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಚಿರತೆ ನೋಡಲು ಮುಗಿಬಿದ್ದರು. ಬಳಿಕ ಆಗಮಿಸಿದ ಅರಣ್ಯಾಧಿಕಾರಿಗಳು ಸೆರೆಸಿಕ್ಕ ಚಿರತೆಯನ್ನು ಕೊಂಡೊಯ್ದರು.
ಸೆರೆಸಿಕ್ಕ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮೇಲಧಿಕಾರಿಗಳಿಂದ ಅನುಮತಿ ಪಡೆದುಕೊಂಡು ಬಂಡೀಪುರ ಅಥವಾ ನಾಗರಹೊಳೆ ಕಾಡಿಗೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.