Mysore
28
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಕೆ.ಆರ್.ಎಸ್ ಬಳಿ ಸದ್ಯಕ್ಕೆ ಟ್ರಯಲ್‌ ಬ್ಲಾಸ್ಟ್‌ ಇಲ್ಲ: ಚಲುವರಾಯಸ್ವಾಮಿ

ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆ ಬಳಿ ಸದ್ಯಕ್ಕೆ ಟ್ರಯಲ್‌ ಬ್ಲಾಸ್ಟ್‌ ನಡೆಸುವುದಿಲ್ಲ. ಇದೇ ಜು.15 ರಂದು ನ್ಯಾಯಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆಯಲಿದ್ದು, ನ್ಯಾಯಾಲಯಕ್ಕೆ ಅಣೆಕಟ್ಟೆಯ ವಾಸ್ತವತೆಯನ್ನು ಮನವರಿಕೆ ಮಾಡುವ ಪ್ರಯತ್ನ ಮಾಡುವುದಾಗಿ ಜಿಲ್ಲಾ ಹಾಗೂ ಕೃಷಿ ಉಸ್ತುವಾರಿ ಸಚಿವ ಎನ್.‌ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದರು.

ಟ್ರಯಲ್‌ ಬ್ಲಾಸ್ಟ್‌ ಸಂಬಂಧ ಶನಿವಾರ(ಜು.6) ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ರೈತ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿದ ಅವರು, ಅಣೆಕಟ್ಡು ನಿರ್ಮಾಣ ಕಷ್ಟಕರ ಎಂಬುದು ತಿಳಿದಿರುವ ವಿಷಯ‌, ಅಣೆಕಟ್ಟು ಸಂರಕ್ಷಣೆ ಬಗ್ಗೆ ಸರ್ಕಾರಕ್ಕೂ ಅಪಾರ ಕಾಳಜಿ ಇದೆ. ಟ್ರಯಲ್ ಬ್ಲಾಸ್ಟ್ ಗೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಕಾನೂನು ಇಲಾಖೆ ಜೊತೆ ಗಂಭೀರ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇನೆ. ನ್ಯಾಯಾಲಯದ ವಿಚಾರಣೆಯು ಜುಲೈ 15 ರಂದು ನಡೆಯಲಿದೆ. ಅಲ್ಲಿಯವರೆಗೂ ಬರುವ ರೈತರ ಅಭಿಪ್ರಾಯಗಳನ್ನು ಪಡೆದು, ತಾಂತ್ರಿಕವಾಗಿ, ಅಧಿಕೃತವಾಗಿ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಅಡ್ವೋಕೇಟ್ ಜನರಲ್ ಜೊತೆ ಮಾತನಾಡಿ ಈ ಬಗ್ಗೆ ಸ್ಪಷ್ಟ ನಿಲುವನ್ನು ಕೋರ್ಟ್ ಮುಂದೆ ತಿಳಿಸಲಾಗುವುದು ಎಂದರು.

ಟ್ರಯಲ್ ಬ್ಲಾಸ್ಟ್ ಕುರಿತಂತೆ ಜಿಲ್ಲೆಯ ಆಸಕ್ತಿ, ರೈತರ ಅಭಿಪ್ರಾಯ ಹಾಗೂ ಕೆ. ಆರ್. ಎಸ್ ಡ್ಯಾಮ್ ನ ಅವಶ್ಯಕತೆಯ ದೃಷ್ಟಿಕೋನವನ್ನು ಇಟ್ಟುಕೊಂಡು, ಡ್ಯಾಮ್ ಗೆ ಸಣ್ಣ ತೊಂದರೆ ಆಗದಂತೆ ಎಚ್ಚರ ವಹಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಕಳೆದ ವಾರದಿಂದ ರೈತರು ಪ್ರತಿಭಟನೆ ಮಾಡುವ ಮೂಲಕ ಟ್ರಯಲ್ ಬ್ಲಾಸ್ಟ್ ನಿಂದ ಅಣೆಕಟ್ಟಿಗೆ ತೊಂದರೆಯಾಗುವುದು ಎಂದು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಸರ್ಕಾರವು ಟ್ರಯಲ್ ಬ್ಲಾಸ್ಟ್ ಗೆ ಯಾವುದೇ ದಿನಾಂಕವನ್ನು ನಿಗಧಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಟ್ರಯಲ್‌ ಬ್ಲಾಸ್ಟ್‌ ಸಂಬಂಧ ರೈತರ ಅಭಿಪ್ರಾಯ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಸಭೆ ಆಯೋಜಿಸಲಾಗುವುದು. ಸಭೆ ನಡೆಯುವ ದಿನದಂದು ಆಯ್ದ ಐದು ರೈತ ಮುಖಂಡರು ಬೆಂಗಳೂರಿಗೆ ಆಗಮಿಸಿ ಸಭೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.

ಟ್ರಯಲ್ ಬ್ಲಾಸ್ಟ್ ಗೆ ಸಂಬಂಧಿಸಿದಂತೆ ಜು.15 ರಂದು ಕೋರ್ಟ್‌ಗೆ ಸಮಗ್ರ ಮಾಹಿತಿ ಕೊಡಲಿದ್ದೇವೆ. ಗೊಂದಲ ಬಗೆಹರಿಯದಿದ್ರೆ ಸಮಯಾವಕಾಶ ಕೇಳಲಾಗುವುದು. ತಾಂತ್ರಿಕ ಸಮಿತಿ ಅಭಿಪ್ರಾಯ, ಅಧಿಕಾರಿಗಳ ಅಭಿಪ್ರಾಯ, ಬೇರೆ ಇರುತ್ತದೆ. ಎಲ್ಲಾ ಸಿದ್ದತೆ ಮಾಡಿಕೊಂಡು ಕೋರ್ಟ್ ಮುಂದೆ ಹೋಗುತ್ತೇವೆ. ಜುಲೈ 15 ರವರೆಗೆ ಟ್ರಯಲ್ ಬ್ಲಾಸ್ಟ್ ನಡೆಸುವುದಿಲ್ಲ ಎಂದರು.

ಸಭೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕಾನೀನಿನಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ತಾಂತ್ರಿಕ ಅಧಿಕಾರಿ ಶಿವಪ್ರಸಾದ್ , ಎ.ಎಸ್.ಪಿ ತಿಮ್ಮಯ್ಯ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Tags: