ಮಂಡ್ಯ: ಕೆಆರ್‌ಎಸ್ ಜಲಾಶಯ ಸುಭದ್ರವಾಗಿದ್ದು, ಯಾರೂ ಆತಂಕ ಪಡಬೇಕಾದ ಅವಶ್ಯಕತೆಯಿಲ್ಲ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದ ಕಾವೇರಿ ಸಭಾಂಗಣದಲ್ಲಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ ಅವರು, ಮಂಡ್ಯ ಜಿಲ್ಲೆಯಲ್ಲಿ 948 ಕೆರೆಗಳಿದ್ದು, ಈಗಾಗಲೇ ಕೆರೆ ತುಂಬಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಬೆಳೆಗಳಿಗೆ ನೀರಿನ ತೊಂದರೆಯಿಲ್ಲ. ತಾಂತ್ರಿಕ ತೊಂದರೆಗಳಿಂದ ಕೆಲವು ಭಾಗಗಳಿಗೆ ಕೃಷಿ ಚಟುವಟಿಕೆಗಳಿಗೆ ನೀರು ತಲುಪಿಲ್ಲ. ಆ ಭಾಗದ ರೈತರು ಆತಂಕ ಪಡಬೇಕಾಗಿಲ್ಲ. ಅಲ್ಲಿಗೂ ತಡವಾಗಿ ನಾಲೆ ನೀರು ತಲುಪುತ್ತದೆ. ಇದನ್ನು ನೀರಾವರಿ ಇಲಾಖೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಕಾವೇರಿ ಅಚ್ಚುಕಟ್ಟಿನಲ್ಲಿ ಹೆಚ್ಚಾಗಿ ಮಳೆಯಾಗಿದೆ. ಕೃಷಿ ಹಾಗೂ ಕೆರೆಗಳಿಗೆ ನೀರು ನೀಡಬೇಕು. ನೀರು ಹರಿಸುವ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ತಿಳಿಸಬೇಕು. ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿನ ಕೊನೆಯ ಭಾಗದಲ್ಲಿರುವ ಕೆರೆಗಳನ್ನು ಸಹ ತುಂಬಿಸಲು ಹೆಚ್ಚಿನ ಆದ್ಯತೆ ನೀಡಿ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕೆಆರ್‌ಎಸ್ ಜಲಾಶಯಕ್ಕೆ ಯಾವುದೇ ತೊಂದರೆಯಿಲ್ಲ. ರೈತರು ಆತಂಕ ಪಡಬೇಕಾದ ಅನಿವಾರ್ಯತೆ ಬಂದಿಲ್ಲ. ಕೆಆರ್‌ಎಸ್ ಜಲಾಶಯ ಸುಭದ್ರವಾಗಿದೆ ಎಂದು ರೈತರಿಗೆ ಧೈರ್ಯ ತುಂಬಿದರು.