ಮಂಡ್ಯ: ಪುಟ್ಟದಾದ ಉಬ್ಬರವಿಳಿತದ ಅಲೆಗಳು. ಜನರಿಗೆ ಬೀಚ್‌ನಂತೆ ಮಜಾ ನೀಡುತ್ತಿರುವ ಹಿನ್ನೀರಿನ ಜಲಧಾರೆ. ಹೀಗೆ ಕೆಆರ್‌ಎಸ್ ಜಲಾಶಯದ ಹಿನ್ನೀರಿನಲ್ಲಿ ಈಗ ಪ್ರವಾಸಿಗರದ್ದೇ ದಂಡು. ಮುಂಗಾರು ಮಳೆ ಕಾವೇರಿ ನದಿಯಲ್ಲಿ ಸದ್ಯ ಈ ಸಮುದ್ರವನ್ನು ಸೃಷ್ಟಿಸಿದಂತಿದೆ.
ಹೌದು, ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ಭರ್ಜರಿ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಮಟ್ಟ ಭಾರೀ ಏರಿಕೆ ಕಂಡಿದ್ದು, ಅನ್ನದಾತರ ಮೊಗದಲ್ಲಿ ಸಂತಸ ಮನೆಮಾಡಿದೆ.
ನೀರಿನ ಮಟ್ಟ ಭಾರೀ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಜಲಾಶಯದ ಹಿನ್ನೀರಿನಲ್ಲಿ ಸಮುದ್ರದಂತೆ ಅಲೆಗಳು ಏಳುತ್ತಿದ್ದು, ಜನರಿಗೆ ಕಡಲ ಕಿನಾರೆಯ ಅನುಭವ ನೀಡುತ್ತಿದೆ. ಹೀಗಾಗಿ ಸಾಯಂಕಾಲವಾಗುತ್ತಲೇ ಪ್ರವಾಸಿಗರು ಹಿನ್ನೀರಿನ ಈ ಪ್ರದೇಶಕ್ಕೆ ಬಂದು ನೀರಾಟ, ಮೋಜುಮಸ್ತಿ ಜೊತೆಗೆ ಸೆಲ್ಪಿ ಕ್ಲಿಕ್ಕಿಸಿ ಸಂಭ್ರಮಿಸುತ್ತಾರೆ.
ಮಳೆ ಆರಂಭಕ್ಕೂ ಮುನ್ನ ನೀರಿಲ್ಲದೇ ಭಣಗುಡುತ್ತಿದ್ದ ಜಲಾಶಯಗಳು ಈಗ ಭರ್ಜರಿ ಮಳೆಯಿಂದ ತುಂಬಿ ತುಳುಕಾಡುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿವೆ. ಮೈಸೂರಿನಿಂದ ಕೆಆರ್‌ಎಸ್ ಮಾರ್ಗವಾಗಿ ತೆರಳಿದರೆ ವೇಣುಗೋಪಾಲಸ್ವಾಮಿ ದೇವಸ್ಥಾನದ ಹಿಂದೆ ಈ ಹಿನ್ನೀರಿನ ಪ್ರದೇಶವನ್ನು ಕಾಣಬಹುದಾಗಿದೆ.
ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಪ್ರವಾಸಿಗರು ವೀಕೆಂಡ್‌ನಲ್ಲಿ ಡ್ಯಾಂ ನೋಡಲು ಹೋಗುತ್ತಿದ್ದಾರೆ. ಇದರ ಜೊತೆಗೆ ಕೆಆರ್‌ಎಸ್ ಡ್ಯಾಂನ ಹಿನ್ನೀರಿನಲ್ಲಿ ಆಟವಾಡುತ್ತಾ ನೆನೆಪಿಗಾಗಿ ಫೋಟೋ ಕ್ಲಿಕ್ಕಿಸಿ ಬರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸದ್ಯ ಮೈಸೂರಿನ ಜನರ ಪಾಲಿಗೆ ಕೆಆರ್‌ಎಸ್ ಬ್ಯಾಕ್ ವಾಟರ್ ಕಡಲ ಕಿನಾರೆಯಷ್ಟು ಖುಷಿ ಕೊಡುತ್ತಿದ್ದು, ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.





