ಮಂಡ್ಯ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಅನುಮಾನ ವ್ಯಕ್ತವಾಗಿದ್ದು, ಈ ಗಲಭೆಯಲ್ಲಿ ಕೇರಳ ಮೂಲದ ಪಿಎಫ್‌ಐ ಸಂಘಟನೆ ಸದಸ್ಯರು ಭಾಗಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ನಾಗಮಂಗಲ ತಾಲ್ಲೂಕಿನಲ್ಲಿ ಗಣೇಶ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನಡೆದ ಕೋಮು ಗಲಭೆ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯನ್ನು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪೂರ್ವನಿಯೋಜಿತ ಕೃತ್ಯ ಎಂದು ಆರೋಪಿಸುತ್ತಿದ್ದಾರೆ. ಪ್ರಕರಣ ಸಂಬಂಧ ಇದುವರೆಗೆ 74 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಮಧ್ಯೆ ಗಲಾಟೆ ಹಿಂದೆ ಕೇರಳ ಮೂಲದವರ ಕೈವಾಡವಿದೆ ಎಂಬ ಅನುಮಾನ ಮೂಡಿದ್ದು, ಎಫ್‌ಐಆರ್ ದಾಖಲಿಸಿರುವ ಪೈಕಿಯಲ್ಲಿ ಇಬ್ಬರೂ ಕೇರಳ ಮೂಲದ ಹೆಸರು ಉಲ್ಲೇಖವಾಗಿದೆ. ಅದರಲ್ಲಿ ಎ44 ಯೂಸುಫ್ ಮತ್ತು ಎ61 ನಾಸೀರ್ ಎಂಬುವವರು ಕೇರಳ ಮೂಲದ ಮಲಪ್ಪುರಂ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಇದೆಲ್ಲದರ ನಡುವೆ ಈ ಇಬ್ಬರು ಆರೋಪಿಗಳು ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯರು ಎಂಬ ಶಂಕೆ ವ್ಯಕ್ತವಾಗಿದೆ.
ಕೆಲವು ದಿನಗಳಿಂದ ನಾಗಮಂಗಲದಲ್ಲಿ ವಾಸವಿದ್ದ ನಾಸೀರ್ ಹಾಗೂ ಯೂಸುಫ್, ಮೊದಲೇ ಸಂಚು ರೂಪಿಸಿ ಗಲಾಟೆಗೆ ಯೋಜನೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಗಣೇಶ ವಿಸರ್ಜನೆಯನ್ನೇ ಅಸ್ತ್ರ ಮಾಡಿಕೊಂಡ ಅವರು, ಆ ದಿನ ಗಲಭೆ ಎಬ್ಬಿಸಿದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ಘಟನೆ ನಡೆಯುವ ಸಂದರ್ಭದಲ್ಲಿ ಕೇರಳದವರು ಬಂದು ಹೋಗಿಲ್ಲ. ಕೇರಳದವರೇ ನಾಗಮಂಗಲ ಬೇಕರಿಯಲ್ಲಿ ಕೆಲಸ ನಿವಹಿಸುತ್ತಿದ್ದಾರೆ. ಹಾಗಾಗಿ ಅವರನ್ನು ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೆಸ್ಟ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆಯಾಗದೇ ಪಿಎಫ್‌ಐ ಸಂಘಟನೆಯವರು ಭಾಗಿಯಾಗಿದ್ದಾರೆ ಎಂದು ಹೇಳಲು ಆಗಲ್ಲ. ಈ ಬಗ್ಗೆ ಯಾವುದೇ ಊಹಾಪೋಹಗಳು ಬೇಡ ಎಂದು ಹೇಳಿದ್ದಾರೆ.