ಮಂಡ್ಯ: ಸೌಲಭ್ಯ ಕೊಟ್ಟರೂ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ಕೆಲ ಶಿಕ್ಷಕರ ನಿರ್ಲಕ್ಷ್ಯದಿಂದಾಗಿ ಮಕ್ಕಳ ಕಲಿಕಾ ಮಟ್ಟ ಕೆಳ ಹಂತಕ್ಕೆ ತಲುಪಿದೆ ಎಂದು ಶಾಸಕ ರವಿಕುಮಾರ್ ಗಣಿಗ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮೊನ್ನೆ ಮಂಡ್ಯ ತಾಲ್ಲೂಕಿನ ಗ್ರಾಮವೊಂದರಲ್ಲಿ ಹೋಗುವಾಗ ಅಲ್ಲಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ನನ್ನನ್ನು ಶಾಲೆಗೆ ಬರುವಂತೆ ಆಹ್ವಾನಿಸಿದರು. ಅದು ಮಂಡ್ಯ ಉತ್ತರ ವಲಯಕ್ಕೆ ಸೇರಿದ ಶಾಲೆ. ಅಲ್ಲಿನ ತರಗತಿ ಕೊಠಡಿಗೆ ಹೋಗಿ ಮಕ್ಕಳೊಂದಿಗೆ ಮಾತನಾಡಿದೆ. ಅಂತೆಯೇ ಕರ್ನಾಟಕದ ರಾಜ್ಯಪಾಲರು ಯಾರೆಂದು ಪ್ರಶ್ನಿಸಿದರೆ ಒಬ್ಬ ವಿದ್ಯಾರ್ಥಿಯೂ ಉತ್ತರ ಕೊಡಲಿಲ್ಲ. ಇದು ನನಗೆ ನಿಜಕ್ಕೂ ಆಶ್ಚರ್ಯ ತರಿಸಿತು. ರಾಜ್ಯಪಾಲರ ಹೆಸರೇ ಗೊತ್ತಿಲ್ಲ ಎಂದರೆ ಶಿಕ್ಷಕರು ಮಕ್ಕಳಿಗೆ ಏನು ಕಲಿಸಿದ್ದಾರೆ ಎಂದು ಬಿಇಓಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಾಬು, ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ಡಿವೈಎಸ್ಪಿ ರಮೇಶ್, ತಾಲ್ಲೂಕು ಪಂಚಾಯಿತಿ ಇಓ ವೀಣಾ ಸೇರಿದಂತೆ ಹಲವುರು ಭಾಗಿಯಾಗಿದ್ದರು.