ಪಾಂಡವಪುರ: ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಒಂದು ವೇಳೆ ನೀರು ಹರಿಸಲು ಮುಂದಾದರೆ ಮಂಡ್ಯ ಜಿಲ್ಲೆ ರೈತರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಮುಖಂಡ ಸಿ.ಎಸ್.ಪುಟ್ಟರಾಜು ಎಚ್ಚರಿಕೆ ನೀಡಿದರು.
ಈ ಬಗ್ಗೆ ಪಾಂಡವಪುರದಲ್ಲಿ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆ ಹಾಗೂ ಕಾನೂನು ಚೌಕಟ್ಟು ವ್ಯವಸ್ಥೆಯಲ್ಲಿ ಕುಮಾರಸ್ವಾಮಿ ಅವರು ಈ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದರು.
ಮಂಡ್ಯ ಜಿಲ್ಲೆಯ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕುಮಾರಸ್ವಾಮಿ ನಡೆದುಕೊಳ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು. ರೈತರ ಜಮೀನಿನಲ್ಲಿ ನೀರಿಲ್ಲದೇ ತೆಕ್ಕಲು ಬೆಳೆದು ನಿಂತಿದೆ. ಯಾವ ಜವಾಬ್ದಾರಿಯನ್ನು ಯಾರು ನಿರ್ವಹಿಸಬೇಕು ಎಂಬುದನ್ನು ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ಬರೆದಿಟ್ಟಿದ್ದಾರೆ. ನಾವು ರೈತರ ಪರ ಇದ್ದೇವೆ. ಕಾನೂನು ಚೌಕಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕಾವೇರಿ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಕೈ ನಾಯಕರಿಗೆ ತಿರುಗೇಟು ನೀಡಿದರು.





