Mysore
26
scattered clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ನುಡಿ ಜಾತ್ರೆಗೆ ಸಕ್ಕರೆ ನಗರ ಸಜ್ಜು : ಸಚಿವ ಚಲುವರಾಯಸ್ವಾಮಿ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆಗೆ ಸಕ್ಕರೆ ನಗರಿ ಮಂಡ್ಯ ಸಜ್ಜಾಗುತ್ತಿದ್ದು, ಸಮ್ಮೇಳನದ ಪ್ರಚಾರಕ್ಕಾಗಿ  ಕನ್ನಡಕ್ಕಾಗಿ ಓಟ ಎಂಬ ಘೋಷ ವಾಕ್ಯದೊಂದಿಗೆ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಅವರು ಇಂದು(ಡಿ.17) 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡಕ್ಕಾಗಿ ಓಟ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ಇಲ್ಲಿ ನೆರೆದಿರುವ ಜನತೆಯನ್ನು ನೋಡಿದ್ರೆ ಖುಷಿ ಆಗುತ್ತಿದೆ. ಇಡೀ ರಾಜ್ಯದ ಜನ ಮಂಡ್ಯದ ಕಡೆ ತಿರುಗಿ ನೋಡುವಂತೆ ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿ, ಸಮ್ಮೇಳನವನ್ನು ಯಶಸ್ವಿಗೊಳಿಸಲು ಕೈಜೋಡಿಸಿ ಎಂದರು.

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ  ಸ್ವಾಮೀಜಿ  ಮಾತನಾಡಿ, ಜಿಲ್ಲೆಯಲ್ಲಿ ನಡೆಯತ್ತಿರುವ ಕನ್ನಡಕ್ಕಾಗಿ ಓಟ ಮ್ಯಾರಥಾನ್ ಸ್ಪರ್ಧೆಯು ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷವಾದ ಕಾರ್ಯಕ್ರಮವಾಗಿದ್ದು, ಈ ಮೂಲಕ ಎಲ್ಲಾ ಕನ್ನಡಿಗರು ಒಂದಾಗಬೇಕು.ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತೆ ಎಂದು ಕನ್ನಡಕ್ಕಾಗಿ ನಡೆಯುತ್ತಿರುವ ಈ ಓಟ ಯಶಸ್ವಿಯಾಗಲಿ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ  ಮಾತನಾಡಿ, ಡಿಸೆಂಬರ್ 20, 21, 22 ರಂದು 3 ದಿನಗಳ ಕಾಲ ಕನ್ನಡ ಸಮ್ಮೇಳನವನ್ನು ಆಚರಿಸುತ್ತಿದ್ದೂ, ಇವತ್ತಿನ ಕನ್ನಡದ ಓಟ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿ ಓಟವಾಗಿದೆ. ಎಲ್ಲರೂ ಮಂಡ್ಯದ ಕನ್ನಡ ಹಿರಿಮೆಯನ್ನು ಹಾಗೂ ಕನ್ನಡದ ಅಭಿಮಾನವನ್ನು ತೋರ್ಪಡಿಸಬೇಕು ಎಂದರು.

ಗೌರಿಗದ್ದೆಯ ವಿನಯ್ ಗುರೂಜಿ  ಮಾತನಾಡಿ, ಕನ್ನಡಕ್ಕಾಗಿ ಓಟ ಮ್ಯಾರಥಾನ್ ಸ್ಪರ್ಧೆ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಮಂಡ್ಯ ಜಿಲ್ಲೆಯು ಕನ್ನಡದ ಉಳಿವಿಗೆ ಸಾಕ್ಷಿಯಾಗಲಿ. ಕನ್ನಡ ನೆಲ, ಜಲ, ಭಾಷೆಯನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕಲೆಯೊಂದಿಗೆ ಕನ್ನಡವನ್ನು ಬೆಳೆಸಿ ಎಂದರು.

ಜಿಲ್ಲಾಧಿಕಾರಿ ಡಾ. ಕುಮಾರ, ವೇದಿಕೆ ಮೇಲಿರುವ ಗಣ್ಯರುಗಳನ್ನು ಸ್ವಾಗತಿಸಿದರು. ಚಲನಚಿತ್ರ ನಟ ಡಾಲಿ ಧನಂಜಯ್, ನೀನಾಸಂ ಸತೀಶ್, ನಟಿ ಸಪ್ತಮಿಗೌಡ ಅವರುಗಳು ಮ್ಯಾರಥಾನ್ ಸ್ಪರ್ಧೆ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಬಿಜಿಎಸ್ ಮಠದ ಪುರುಷೋತ್ತಮ ಗುರೂಜಿ, ಶಾಸಕರುಗಳಾದ ಪಿ.ರವಿಕುಮಾರ್, ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ, ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ರವಿಕಾಂತೆಗೌಡ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ ಶಿವಾನಂದಮೂರ್ತಿ, ನಗರಸಭೆ ಅಧ್ಯಕ್ಷ ಎಂ ಬಿ ಪ್ರಕಾಶ್, ಮೈಸೂರು ಸಕ್ಕರೆ ಕಂಪನಿ ನಿಯಮಿತದ ಅಧ್ಯಕ್ಷ ಸಿಡಿ ಗಂಗಾಧರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್, ವೆಂಕಟರಮಣೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:
error: Content is protected !!