Mysore
19
overcast clouds

Social Media

ಶನಿವಾರ, 10 ಜನವರಿ 2026
Light
Dark

ಕನ್ನಡವನ್ನು ಡಿಜಿಟಲ್ ಕ್ಷೇತ್ರಕ್ಕೆ ಕೊಂಡೊಯ್ಯಬೇಕಿದೆ: ಸಂವಾದಲ್ಲಿ ಪ್ರೊ.ಕೃಷ್ಣೇಗೌಡ ಅಭಿಮತ

ಮಂಡ್ಯ: ಅತ್ಯಂತ ತುರ್ತಾಗಿ ಕನ್ನಡವನ್ನು ಡಿಜಿಟಲ್ ಕ್ಷೇತ್ರಕ್ಕೆ ಕೊಂಡೊಯ್ಯಬೇಕಿದೆ. ಹೆಚ್ಚೆಚ್ಚು ಬಳಕೆಗೆ ಒಳಗಾಗುವ ವಿಷಯಗಳು ಡಿಜಿಟಲ್ ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ವೀಕ್ಷಣೆಗೆ ದೊರೆಯುತ್ತವೆ. ಕನ್ನಡ ಹೆಚ್ಚು ಬಳಕೆಗೆ ಒಳಗಾದಲ್ಲಿ ಅದರಲ್ಲಿ ಸುಧಾರಣೆಗಳನ್ನು ಕಾಣಲು ಸಾಧ್ಯವಾಗುತ್ತದೆ ಎಂದು  ಎಂದು ಖ್ಯಾತ ವಾಗ್ಮಿ, ಹಿರಿಯ ಪ್ರಾಧ್ಯಾಪಕ ಹಾಗೂ ಸಾಹಿತಿಗಳಾದ ಪ್ರೊ.ಕೃಷ್ಣೇಗೌಡ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯೋಜಿಸಲಾಗಿದ್ದ ವಾರದ ಸಾಹಿತ್ಯ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸುವ ಪುಸ್ತಕಗಳನ್ನು ಡಿಜಿಟಲೀಕರಣ ಗೊಳಿಸುವಂತೆ ಸಲಹೆ ನೀಡಲಾಗುವುದು ಎಂದು ಹೇಳಿದರು.

ಯಾರಿಗೆಬೇಕಾದರೂ ಸಮ್ಮೇಳನಾಧ್ಯಕ್ಷ ಸ್ಥಾನ ಸಿಗುವಂತಾದರೆ ಯಾರಿಗೆ ಬೇಡ ಎನ್ನುವಂತಾಗುತ್ತದೆ. ಹೀಗಾದರೆ ಸಾಹಿತಿಗಳು ಸಮ್ಮೇಳನಾಧ್ಯಕ್ಷ ಆಗಲು ಅವಕಾಶ ಸಿಗುವುದಿಲ್ಲ. ಸಮ್ಮೇಳನವು ಸಾಹಿತ್ಯ ಸಮ್ಮೇಳನವಾಗಿ ಉಳಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸಮ್ಮೇಳನಾಧ್ಯಕ್ಷರ ಪದವಿ ಸಾಹಿತ್ಯೇತರರಿಗೆ ನೀಡಬೇಕಾಗಿ ಬಂದಲ್ಲಿ ಮೊದಲು ರಾಜಕೀಯದ ಎಲ್ಲ ಪಕ್ಷದವರಿಗೂ ನೀಡಬೇಕಾಗುತ್ತದೆ. ತದನಂತರ ಉದ್ಯಮಿಗಳು ಸೇರಿದಂತೆ ಸಮಾಜದ ಎಲ್ಲವರ್ಗದವರೂ ಕೇಳಲಾರಂಭಿಸುತ್ತಾರೆ ಎಂದು ಎಚ್ಚರಿಸಿದರು.

ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಸಾಹಿತ್ಯೇತರರ ಪರಿಗಣನೆಯ ವಿವಾದ ಆರಂಭ ಮಾಡಿದ್ದೇ ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಬಾಯಿಂದ, ಆದರೆ ನಂತರ ಅವರು ನನ್ನಿಂದಲ್ಲ ಆದರೆ ಈ ರೀತಿಯ ವಾದವಿದೆ. ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯೇತರರು ಇರಬೇಕು. ಆದರೆ ದೊಡ್ಡ ಪರಂಪರೆಯುಳ್ಳ ಸಾಹಿತ್ಯ ಸಮ್ಮೇಳನವು ಸಾಹಿತಿಗಳದ್ದು ಎಂಬುದನ್ನು ಅರಿಯಬೇಕು ಎಂದು ಹೇಳಿದರು.

ಪರಿಷತ್ ಅಧ್ಯಕ್ಷರು ಸಾಹಿತ್ಯೇತರರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಸಂಬಂಧ ಆಡಿದ ಮಾತುಗಳು ಅರಿವಿಲ್ಲದೇ ಹೀಗೂ ಆಗಬಹುದೇ, ಚರ್ಚೆಗೆ ಅವಕಾಶ ನೀಡುವ ದೃಷ್ಠಿಯಿಂದ ಹೇಳಿದ್ದರೆ ಕ್ಷಮ್ಯವಿದೆ. ಆದರೆ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷ ಸ್ಥಾನದಿಂದ ತಪ್ಪಿಸಬೇಕೆಂದು ಬೇಕಂತರಲೇ ಮಾತನಾಡಿದ್ದರೆ ಅದು ತಪ್ಪು ಎಂದು ಬಣ್ಣಿಸಿದರು.

ಸಾಹಿತ್ಯ ಎಂಬುದು ಸಮಾಜವನ್ನು ಒಳಗೊಳ್ಳಬೇಕು. ಸಮಾಜದ ಎಲ್ಲರೂ ಸಾಹಿತ್ಯದ ಭಾಗ ಎಂಬುದು ಪ್ರಾರಂಭವಾಗಿದೆ. ಸಾಹಿತ್ಯದ ಉದ್ದೇಶ, ಪ್ರಯೋಜನ ಏನು ಎನ್ನುವ ವಾದ ಸಾಹಿತ್ಯದ ಆರಂಭದ ಕಾಲದಿಂದಲೂ ಇದೆ. ಸಾಹಿತ್ಯ ತಿಳಿಯುವುದು, ಓದುವಿಕೆಯಿಂದ ಪುಣ್ಯ ಸಿಗುತ್ತದೆ, ಸಂತೋಷ ಸಿಗುತ್ತದೆ ಎಂಬ ಹೇಳಿಕೆಯಿತ್ತು ಎಂದರು.

ಸಾಹಿತಿಗಳಲ್ಲಿ ಪ್ರತಿಕ್ರಿಯಿಸುವ ನಿಲುವುಗಳನ್ನು ನಿಭಾಯಿಸುವ ತಾಕತ್ತು ಇಲ್ಲವಾಗಿದೆ. ಅಧಿಕಾರ ಸ್ಥಾನಗಳನ್ನು ಕುವೆಂಪು ಹಾಗೂ ಕಾರಂತರಂತೆ ತೋಳಂತರದ ದೂರದಲ್ಲಿಡಬೇಕು. ಅಧಿಕಾರ ಸ್ಥಾನಗಳನ್ನು ಹತ್ತಿರ ಇಟ್ಟುಕೊಳ್ಳಲು ಸಾಹಿತಿಗಳು ಮುಂದಾದಾಗಿನಿಂದ ಎಲ್ಲವೂ ರಾಜಿಯಾದವು. ಇದು ಎಲ್ಲಾ ಪಂತಗಳಿಗೂ ಅನ್ವಯವಾಗುತ್ತವೆ ಎಂದು ತಿಳಿಸಿದರು.

ಸಾಹಿತಿಗಳು ಅಧಿಕಾರ ಸ್ಥಾನಗಳನ್ನು ತೋಳಂತರದಲ್ಲಿ ಇರಿಸಿಕೊಳ್ಳದಿದ್ದರೆ, ನಿಭಾಯಿಸಲು ಸಾಧ್ಯವಾಗುವುದಿಲ್ಲ. ಇಡೀ ಸಾಹಿತ್ಯ ಜಗತ್ತು ಎಡ, ಬಲ ಭಾಗಗಳಾಗಿ ಒಡೆದಿತ್ತು, ಸಾಹಿತ್ಯದಲ್ಲಿ ಎಡ, ಬಲ ಇರುವುದಿಲ್ಲ ಅಜೆಂಡಾಗಳಿರುತ್ತವೆ. ಅಜೆಂಡಾಗಳಲ್ಲಿ ಸತ್ಯವಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿಗಳು ಒಬ್ಬರಿನ್ನೊಬ್ಬರ ಮುಖ ನೋಡದಷ್ಟು ವಿರಸ ಮಾಡಿಕೊಂಡಿದ್ದು, ಸಾಮಾನ್ಯರ ಜಗಳದಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಸಾಹಿತ್ಯ ಎನ್ನುವುದು ಪ್ರತ್ಯೇಕ ಪಕ್ಷಗಳನ್ನು ಸೃಷ್ಠಿಸಿಕೊಂಡ ಸಾಹಿತಿಗಳಿಗೇ ಪ್ರಬುದ್ಧತೆಯ ಪಾಠ ಮಾಡಬೇಕಿದೆ. ಸಾಹಿತಿಗಳು ಕೆಟ್ಟಿರಬಹುದು ಆದರೆ ಸಾಹಿತ್ಯಕ್ಕೆ ತನ್ನದೇ ಆದ ಘನತೆಯಿದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಕ್ಷಗಳನ್ನು ಮೀರಿ ನಿಲ್ಲಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಭಾಷಾ ಬೆಳವಣಿಗೆಯ ದೃಷ್ಠಿಯಿಂದ ಇತರೇ ಕ್ಷೇತ್ರದವರನ್ನು ಒಳಗೊಂಡಂತೆ ಕಾರ್ಯಕ್ರಮಗಳನ್ನು ಮಾಡಬಹುದು, ಆದರೆ ಸಾಹಿತ್ಯದ ಚರ್ಚೆ ನಡೆಯುವ ವೇಳೆ ಇತರೇ ಕ್ಷೇತ್ರಗಳನ್ನು ಸಾಹಿತ್ಯದ ನೆಲೆಯಲ್ಲಿ ಚರ್ಚೆ ಮಾಡಬೇಕಾಗುತ್ತದೆ ಎಂದರು.

ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೊಳಿಸಲು ಪರಿಷತ್‌ನ ಅಧ್ಯಕ್ಷರು ಮತ್ತೆ ಮತ್ತೇ ನಿರ್ಣಯಗಳ ಬಗ್ಗೆ ಮಾತನಾಡಬೇಕು. ಸಾಧ್ಯವಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರುವಂತಹ ಕೆಲಸ ಮಾಡಬೇಕು.
ಹಂಪಾ ನಾಗರಾಜಯ್ಯ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿಗಳೇ ಉದ್ಘಾಟಿಸಬೇಕು ಎಂದು ನಿರ್ಣಯವಾಯಿತು. ಇದಾದ ನಂತರ ಮುಖ್ಯಮಂತ್ರಿಗಳಿಂದ ಸಾಹಿತ್ಯ ಸಮ್ಮೇಳನ ಉದ್ಘಾಟಿಸುವಂತದ್ದು ಸಂಸ್ಕೃತಿಯಾಯಿತು. ಜಿಲ್ಲಾ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಮಂತ್ರಿ ಉದ್ಘಾಟಿಸಬೇಕೆಂದು ಅಲಿಖಿತ ಕಾನೂನಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಕಾನೂನಿನ ಪ್ರಕಾರ ಸ್ವಾಯತ್ತ ಪರಿಷತ್ತು, ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರದ ಅನುದಾನ ಪಡೆಯುವುದರಿಂದ, ಅದಕ್ಕಾಗಿ ಅಧಿಕಾರಸ್ತರ ಕಡೆಗೆ ಸಾಹಿತ್ಯ ಪರಿಷತ್ತಿನ ಆಡಳಿತ ಮಂಡಳಿ ಮುಖಮಾಡಿರುವುದರಿಂದ ವಾಸ್ತವವಾಗಿ ಸ್ವಾಯತ್ತವಾಗಿ ಉಳಿದುಕೊಂಡಿಲ್ಲ ಎಂದರು.

ಸಾಹಿತ್ಯ ಪರಿಷತ್ತಿನ ಅಧ್ಯಿಕ್ಷರಾಗಿ ಆಯ್ಕೆಯಾದ ಮಾತ್ರಕ್ಕೆ ನೀವು ಏನನ್ನು ಬೇಕಾದರೂ ಮಾಡಿ ಎಂದು ಅನುಮತಿಕೊಟ್ಟಂತಲ್ಲ, ಪರಿಷತ್ತಿನ ಅಧ್ಯಕ್ಷರಾದವರು ಮತದಾನದ ಬಗ್ಗೆ ಮಾತನಾಡಬಾರದು. ಪರಿಷತ್ ಅಧ್ಯಕ್ಷ ಸ್ಥಾನವೆಂಬುದು ಮತದಾನವನ್ನು ಮೀರಿರುವಂತದ್ದು ಎಂದ ಅವರು ಸಮ್ಮೇಳನಾಧ್ಯಕ್ಷರ ಆಯ್ಕೆ ಕಾರ್ಯಕಾರಿ ಮಂಡಳಿಯಲ್ಲಿ ಚರ್ಚೆಯ ಮೂಲಕ ಮತದಾನವಾಗುತ್ತದೆ. ಗೌಪ್ಯ ಮತದಾನದ ಅವಕಾಶ ಇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ನಮ್ಮ ಚರ್ಚೆಗಳು ಬೇಸರ, ದ್ವೇಶ ಹುಟ್ಟಿಸದಂತೆ ನಾವು ಪ್ರಬುದ್ಧರಾಗಬೇಕು. ಅಭಿಪ್ರಾಯಗಳು ಇಷ್ಟವಾಗದಿದ್ದರೂ, ವಿರೋಧಗಳಿದ್ದರೂ, ಜನರ ಪ್ರತಿಕ್ರಿಯೆಯಿಂದ ವಿರೋಧಿಸುವವರು ನಾಚಿಕೊಳ್ಳವಂತೆ ಪ್ರೀತಿಯಿಂದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ ಜನರಲ್ಲಿ ಮನವಿ ಮಾಡಿದರು.

ಸಂವಾದದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ್, ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಇದ್ದರು.

Tags:
error: Content is protected !!