ಶ್ರೀರಂಗಪಟ್ಟಣ: ಭಾರತದ ಪರಂಪರೆಗೆ ಸೈನ್ಯಕ್ಕೆ ಇರುವಷ್ಟೇ ಶಕ್ತಿ ಇದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ತಾಲ್ಲೂಕಿನ ಬೊಮ್ಮೂರು ಅಗ್ರಹಾರ ಸಮೀಪದ ಕಾವೇರಿ ಕನ್ಯಾ ಗುರುಕುಲದಲ್ಲಿ ಸೋಮವಾರ ಕನ್ಯಾ ಗುರುಕುಲದ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಹಸ್ರಾರು ವರ್ಷಗಳಿಂದ ಭಾರತೀಯ ಸಂಸ್ಕತಿ ಮತ್ತು ಪರಂಪರೆ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ವೇದೋಪನಿಷತ್ತುಗಳು ದೇಶದ ಹಿರಿಮೆಯನ್ನು ಜಗತ್ತಿಗೆ ಸಾರಿವೆ. ಸಂಸ್ಕತ ಭಾಷೆಯಲ್ಲಿರುವ ವೇದ, ವೇದಾಂತ, ಉಪನಿಷತ್ತುಗಳು ನಿರಂತರವಾಗಿ ಜನರಿಗೆ ತಲುಪುತ್ತಿವೆ. ಇದರಿಂದ ಇತರ ಭಾಷೆಗಳೂ ಶ್ರೀಮಂತಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪರಂಪರೆಯನ್ನು ಜಗತ್ತಿನಾದ್ಯಂತ ಪಸರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮೈಸೂರು ಅರಸರು ಸಿಡುಬು ಕಾಯಿಲೆಗೆ ಇಂಗ್ಲಿಷ್ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರಚಾರ ಮಾಡಿಸಿದ್ದರು. ನಮ್ಮ ನೈಜ ಪರಂಪರೆ ಉಳಿಸುವಲ್ಲಿ ಮಹಿಳೆಯರು ಮುಖ್ಯ ಪಾತ್ರ ವಹಿಸುತ್ತಾರೆ. ಈ ದಿಸೆಯಲ್ಲಿ ಕಾವೇರಿ ಕನ್ಯಾ ಗುರುಕುಲ ಭವಿಷ್ಯದ ತಾಯಂದಿರಿಗೆ ಸಂಸ್ಕ ತಿ, ಸಂಸ್ಕಾರಗಳನ್ನು ಕಲಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳೀದರು.
ಕಾವೇರಿ ಕನ್ಯಾ ಗುರುಕುಲದ ಮುಖ್ಯಸ್ಥ ಕೆ.ಕೆ.ಸುಬ್ರಹ್ಮಣಿ ಮಾತನಾಡಿ, ೨೦೧೩ರಲ್ಲಿ ಆರಂಭವಾದ ಕಾವೇರಿ ಕನ್ಯಾ ಗುರುಕುಲ ಇದುವರೆಗೆ ನೂರಾರು ಹೆಣ್ಣು ಮಕ್ಕಳಿಗೆ ಸಂಸ್ಕ ತ, ವೇದಾಂತ, ಯೋಗ, ಭವದ್ಗೀತೆ, ಬ್ರಹ್ಮ ಸೂತ್ರಗಳ ಸಹಿತ ಪಂಚಮುಖಿ ಶಿಕ್ಷಣ ನೀಡುತ್ತಿದೆ. ಉತ್ತರ ಕರ್ನಾಟಕದ ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಈ ವರ್ಷದಿಂದ ಕನ್ಯಾ ಗುರುಕುಲವನ್ನು ಧಾರವಾಡಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಿಳಿಸಿದರು.





