ಮಂಡ್ಯ: ಬಿಬಿಎಂಪಿ ವ್ಯಾಪ್ತಿಯ ೧೧೦ ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಕಾವೇರಿ ಐದನೇ ಹಂತ ಲೋಕಾರ್ಪಣೆ ಕಾರ್ಯಕ್ರಮವನ್ನು ಅ.೧೬ರಂದು ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ (ಟಿ.ಕೆ.ಹಳ್ಳಿ)ಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದು ಮೈಷುಗರ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೪೩೩೬ ಕೋಟಿ ರೂ ವೆಚ್ಚದ ಸದರಿ ಯೋಜನೆಯ ಮೂಲಕ ೪ ಲಕ್ಷ ಸಂಪರ್ಕ ಕಲ್ಪಿಸಲಾಗುತ್ತಿದ್ದು, ೫೦ ಲಕ್ಷ ಫಲಾನುಭವಿಗಳಿಗೆ ನೀರು ಒದಗಿಸಲಾಗುತ್ತದೆ. ೭೭೫ ಎಂ.ಎಲ್.ಡಿ ಹೆಚ್ಚುವರಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸದರಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ನೂತನ ಮೈಷುಗರ್ ಕಾರ್ಖಾನೆ ಸಂಬಂಧ ಡಿಪಿಆರ್ ಸಿದ್ದ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ತೆರಳಿ ಅನುಮೋದನೆ ನೀಡುವಂತೆ ಮನವಿ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಚಿದಂಬರ್, ಮುಖಂಡರಾದ ಗುರುರಾಜ್, ಮುಜಾಯಿದ್, ಗ್ಯಾರೆಂಟಿ ಅನುಷ್ಠಾನದ ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ್ ಬಾಬು, ಹಿಂದುಳಿದ ವರ್ಗದ ಮುಖಂಡ ನಾಗಭೂಷಣ್, ಚಿನಕುರಳಿ ರಮೇಶ್ ಇದ್ದರು.