ಮಂಡ್ಯ: ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಭರ್ಜರಿ ಮಳೆ ಸುರಿಯುತ್ತಿರುವ ಪರಿಣಾಮ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಹಳೆ ಮೈಸೂರು ಭಾಗದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.
ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ಕಳೆದ ಕೆಲ ದಿನಗಳಿಂದ ಭರ್ಜರಿ ಒಳಹರಿವು ಹರಿದು ಬರುತ್ತಿದ್ದು, ಜಲಾಶಯದ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. 124.80 ಅಡಿಗಳ ಸಾಮರ್ಥವಿರುವ ಜಲಾಶಯದ ಇಂದಿನ ನೀರಿನ ಮಟ್ಟ 92.80 ಅಡಿಗಳಾಗಿದೆ. ನಿನ್ನೆಗೂ ಇಂದಿಗೂ ಒಂದೇ ದಿನಕ್ಕೆ 2 ಅಡಿಗಳ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಜಲಾಶಯದಿಂದ 496 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
ಕೊಡಗಿನಲ್ಲಿ ಮಳೆ ಮುಂದುವರಿದರೆ ಕೆಆರ್‌ಎಸ್ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆ ಕಂಡುಬರಲಿದೆ. ಒಳಹರಿವು ಹೆಚ್ಚಾದರೆ, ಹೊರಹರಿವನ್ನು ಏರಿಕೆ ಮಾಡುವ ಸಾಧ್ಯತೆಯಿದ್ದು, ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಬಹಳ ಸುರಕ್ಷತೆ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇನ್ನೂ ನಾಲ್ಕು ದಿನ ಮಳೆ ಹೀಗೇಯೇ ಮುಂದುವರಿಯಲಿದ್ದು, ಕೊಡಗಿನಲ್ಲಿ ಮಳೆ ಭಾರೀ ಅವಾಂತರ ಸೃಷ್ಟಿಸಲಿದೆ ಎನ್ನಲಾಗುತ್ತಿದೆ. ಇದು ಮುಂದುವರಿದ್ರೆ ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರಲಿದ್ದು, ಅನ್ನದಾತರ ಮೊಗದಲ್ಲಿ ಸಂತಸ ಮನೆ ಮಾಡಲಿದೆ.





