Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ಕಾವೇರಿ ಆರತಿಗೆ ₹100 ಕೋಟಿ : ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರೋಧ

ಮಂಡ್ಯ: ಕಾವೇರಿ ಆರತಿಗೆ ₹100 ಕೋಟಿ ಖರ್ಚು ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ನಗರದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾವೇರಿ ಆರತಿಗೆ 100 ಕೋಟಿ ಯಾಕೆ ಬೇಕು? ನಮ್ಮ ಪುಟ್ಟರಾಜು ಕೆರೆತಣ್ಣೂರಿನಲ್ಲಿ ಮಾಡಿದಾಗ ಇಂಥ ಕಾರ್ಯಕ್ರಮ ಮಾಡಿದಾಗ ಎಷ್ಟು ಖರ್ಚು ಆಯಿತು ಎಂದು ಕೇಳಿ. ಇಷ್ಟೊಂದು ಬೃಹತ್ ಮೊತ್ತ ವೆಚ್ಚ ಮಾಡುವುದು ಏತಕ್ಕೆ? ₹100 ಕೋಟಿ ಖರ್ಚು ಮಾಡುವುದಕ್ಕೆ ನನ್ನ ವಿರೋಧ ಇದೆ ಎಂದರು.

ಕಾಲ್ತುಳಿತ; ಸರ್ಕಾರದಿಂದ ಗಂಟೆಗೊಂದು ನಿರ್ಧಾರ
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ವಿಚಾರದಲ್ಲಿ ರಾಜ್ಯ ಸರ್ಕಾರ ಗಂಟೆ ಗಂಟೆಗೊಂದು ನಿರ್ಧಾರ ಮಾಡುತ್ತಿದೆ. ಅಂತಿಮವಾಗಿ ಏನು ಮಾಡುತ್ತದೆ ಎಂಬುದನ್ನು ನೋಡಬೇಕು. ಮೊದಲು ಮ್ಯಾಜಿಸ್ಟ್ರಿಯಲ್ ತನಿಖೆ ಎಂದರು. ಆಮೇಲೆ ನ್ಯಾಯಾಂಗ ತನಿಖೆ ಎಂದು ಹೇಳಿದರು. ಅದಾದ ಮೇಲೆ ಸಿಐಡಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಅಂತಿಮವಾಗಿ ಯಾವ ತನಿಖೆ ವರದಿ ಪಡೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು ಎಂದು ಟೀಕಿಸಿದರು.

ಇದನ್ನು ಸರ್ಕಾರ ಎನ್ನಲು ಆಗುತ್ತದೆಯೇ? ಯಾವುದೇ ತೀರ್ಮಾನ ಮಾಡಿದರೆ ಸ್ಪಷ್ಟತೆ ಇರಬೇಕು. ಅಧಿಕಾರಿಗಳ‌ ತಪ್ಪು ಏನಿತ್ತು? ಎಫ್‌ಐಆರ್‌ನಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಆಗಿಲ್ಲ ಎಂದು ಉಲ್ಲೇಖ ಮಾಡಿದ್ದಾರೆ. ಸರ್ಕಾರ ಸಂಪೂರ್ಣವಾಗಿ ವಿಫಲ ಆಗಿದೆ.

ಪೆಹಲ್ಗಾಂ, ಪ್ರಯಾಗ್‌ರಾಜ್‌ನಲ್ಲಿ ಘಟನೆಗಳನ್ನು ಹೇಳುತ್ತಿದ್ದಾರೆ. ಆ ಘಟನೆಗಳಿಗೂ ಇದಕ್ಕೂ ಏನು ಸಂಬಂಧ? ಇಲ್ಲಿ ಇವರು ಮಾಡಿರುವ ತಪ್ಪಿಗೆ ಪೆಹಲ್ಗಾಂ, ಪ್ರಯಾಗ್‌ರಾಜ್ ವಿಚಾರ ತರುತ್ತಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮುಂಬೈ ಮೇಲೆ ಉಗ್ರರ ದಾಳಿ ಆಯಿತಲ್ಲ, ಆಗ ಸಿಂಗ್ ಅವರು ರಾಜೀನಾಮೆ ನೀಡಿದ್ದರಾ? ಕೇವಲ ಸಿಎಂ, ಡಿಸಿಎಂ ವರ್ಚಸ್ಸು ಹೆಚ್ಚಿಸಿಕೊಳ್ಳಲಿಕ್ಕೆ ಮಾಡಿದ ಶೋ ಇದು ಎಂದು ಅವರು ಟೀಕಾ ಪ್ರಹಾರ ನಡೆಸಿದರು.

ಕುಮಾರಸ್ವಾಮಿ ತಮ್ಮ ಆರೋಗ್ಯ ನೋಡಿಕೊಳ್ಳಲಿ ಎಂದು ಹೇಳಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವರು, ನನ್ನ ಆರೋಗ್ಯವನ್ನ ದೇವರು ನೋಡಿಕೊಳ್ಳುತ್ತಾನೆ. ಮಂಡ್ಯ ಜನರ ಹಾರೈಕೆಯಿಂದ ನನಗೆ ಏನು ಆಗಲ್ಲ. ನಾನು ಯಾವುದೇ ಒತ್ತಡದಲ್ಲಿ ಇಲ್ಲ. ಅವರೇ ಒತ್ತಡದಲ್ಲಿ ಇದ್ದಾರೆ ಎಂದು ಟಾಂಗ್ ನೀಡಿದರು.

Tags:
error: Content is protected !!