ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ ಬೆಂಕಿ ಕಾಣಿಸಿಕೊಂಡು ಧಗಧಗಿಸಿದ ಘಟನೆ ನಡೆದಿದೆ.
ಸುದ್ದಿ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಸುಂದರ ಅವರ ನೇತೃತ್ವದಲ್ಲಿ ಬೆಂಕಿ ಬಿದ್ದಿದ್ದ ಸ್ಥಳಕ್ಕೆ ಭಾವಿಸಿ ಹಲವು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಎಸಿಎಫ್ ಮರಿಸ್ವಾಮಿ ಮಾತನಾಡಿ ಅಲಗುಮೂಲೆ ಮುಂಬೆಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿಚ್ಚಿದ ವಿಚಾರ ತಿಳಿಯುತ್ತಿದ್ದಂತೆ ನಮ್ಮ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಬೆಂಕಿಯು ಆಕಸ್ಮಿಕವಾಗಿ ಬಿದ್ದಿದೆಯೋ ಅಥವಾ ಯಾರಾದರೂ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೋ ಎಂಬುದನ್ನು ಪತ್ತೆಹಚ್ಚಬೇಕಿದೆ ಎಂದು ತಿಳಿಸಿದರು.
ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಬೆಂಕಿ ಹರಡಿ ಹೊತ್ತಿ ಉರಿಯುತ್ತಿದ್ದ ಮಾಹಿತಿ ಅರಿತು ಕಾವೇರಿ ವನ್ಯಜೀವಿಧಾಮದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದರು. ಬೇಸಿಗೆ ಸಮಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಬೆಂಕಿ ಪ್ರಕರಣಗಳು ಡಿಸೆಂಬರ್ ನಲ್ಲೆ ಉಂಟಾಗಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.




