Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮಿಮ್ಸ್‌ನಲ್ಲಿ ಬಾಲಕಿ ಸಾವು ಪ್ರಕರಣ : ತಜ್ಞರ ತಂಡದಿಂದ ತನಿಖೆ ನಡೆಸಲು ನಿರ್ಧಾರ

Girls death case at MIMS

ಮಂಡ್ಯ: ಮಳವಳ್ಳಿ ತಾಲ್ಲೂಕಿನ ನೆಲ್ಲೂರು ಗ್ರಾಮದ ರೈತ ನಿಂಗರಾಜು-ರಂಜಿತಾ ದಂಪತಿಯ ಪುತ್ರಿ ಸಾನ್ವಿ (7) ಸಾವಿಗೆ ಮಿಮ್ಸ್ ವೈದ್ಯರ ನಿರ್ಲಕ್ಷ ಕಾರಣ ಎಂಬ ಗುರುತರ ಆರೋಪ ಬಂದಿರುವುದರಿಂದ ಈ ಪ್ರಕರಣವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಸೂಪರಿಂಟೆಂಡೆಂಟ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.
ಬಾಲಕಿಯ ಸಾವಿಗೆ ಸಂಬಂಧಿಸಿದಂತೆ ಮಿಮ್ಸ್‌ನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರ ನೇತೃತ್ವದಲ್ಲಿ ಸಭೆ ನಡೆಸಿದ ಶಾಸಕರು, ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ ತಜ್ಞರ ಸಮಿತಿಯನ್ನು ರಚಿಸಿ ಆದೇಶಿಸಿದೆ ಎಂದರು.

ಮಿಮ್ಸ್ ಆಸ್ಪತ್ರೆಯಲ್ಲಿ ಬಾಲಕಿ ಸಾವಿಗೀಡಾಗಿರುವುದು ನೋವಿನ ಸಂಗತಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ನಮ್ಮದು ತಪ್ಪಿಲ್ಲ ಎಂದು ಹೇಳಿದರೆ, ಮೃತ ಬಾಲಕಿಯ ಪೋಷಕರು ವೈದ್ಯರ ನಿರ್ಲಕ್ಷ ದಿಂದಲೇ ನಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ಆರೋಪ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಪ್ರದೀಪ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಈ ತಂಡದಲ್ಲಿ ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರದಲ್ಲಿರುವ ಮೂಳೆ ಮತ್ತು ಕೀಲು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಹೇಶ್, ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಬಾಲಕೃಷ್ಣ, ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ.ಚೇತನಾನಂದ ಅವರು ಸದಸ್ಯರಾಗಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಸೋಮಶೇಖರ್ ಅವರು ಸದಸ್ಯ ಕಾರ್ಯದರ್ಶಿಗಳಾಗಿ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಸಮಿತಿಯು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೂಡಲೇ ತನಿಖೆ ನಡೆಸಿ ತನಿಖಾ ವರದಿಯನ್ನು 15 ದಿನದೊಳಗಾಗಿ ತಪ್ಪದೇ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಲಾಗಿದೆ ಎಂದರು.

ಘಟನೆ ಸಂಬಂಧ ಮಿಮ್ಸ್ ವೈದ್ಯರಿಂದ ಮಾಹಿತಿ ಕಲೆ ಹಾಕಲಾಗಿದ್ದು, ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿರಬಹುದೆಂಬ ಹೇಳಿಕೆ ಸರಿಯಲ್ಲ, ಮಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಉಡಾಫೆ ವರ್ತನೆ ಬಗ್ಗೆ ಸಾರ್ವಜನಿಕ ದೂರುಗಳನ್ನು ಆಲಿಸಿ, ಆ ಬಗ್ಗೆಯೂ ಚರ್ಚಿಸಲಾಗಿದೆ. ಸ್ಥಾನಿಕ ವೈದ್ಯಾಧಿಕಾರಿ ಡಾ.ದರ್ಶನ್ ಅವರ ವರ್ತನೆ ಬಗ್ಗೆಯೂ ಚರ್ಚಿಸಿ ಎಚ್ಚರಿಕೆ ನೀಡಲಾಗಿದೆ ಎಂದರು.

Tags:
error: Content is protected !!