ಮಂಡ್ಯ: ಕಳೆದ ಒಂದೂವರೆ ವರ್ಷದಿಂದ ನೀರಿಲ್ಲದೇ ಭಣಗುಡುತ್ತಿದ್ದ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಜಲಪಾತದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ಕಾವೇರಿ ಕೊಳ್ಳದ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಗಗನಚುಕ್ಕಿ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಜಲಪಾತದ ಸೊಗಸನ್ನು ಕಣ್ತುಂಬಿಕೊಳ್ಳಲು ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆಗಳಿಂದ ಪ್ರವಾಸಿಗರ ದಂಡೇ ಜಲಪಾತದತ್ತ ಹರಿದು ಬರುತ್ತಿದೆ.
ಎತ್ತರದಿಂದ ಧುಮ್ಮಿಕ್ಕುವ ಗಗನಚುಕ್ಕಿ ಜಲಪಾತ ಹಾಗೂ ಕಲ್ಲುಬಂಡೆಗಳ ನಡುವೆ ಭೋರ್ಗರೆಯುವ ಕೊಳ್ಳೇಗಾಲದ ಭರಚುಕ್ಕಿ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಎರಡೂ ಜಲಧಾರೆಗಳು ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಗಡಿಯಂಚಿನಲ್ಲೇ ಇವೆ.
ಕೊಡಗಿನ ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ ನದಿಯು ಬೆಟ್ಟಗುಡ್ಡ, ಕಾಡುಮೇಡುಗಳ ಮೂಲಕ ಸಾಗಿ ಶಿವನಸಮುದ್ರ ತಲುಪುತ್ತಿದ್ದಂತೆಯೇ ಧುಮುಕಿ ಗಗನಚುಕ್ಕಿಯಾಗಿ, ಬಳಿಕ ಭರಚುಕ್ಕಿಯಾಗಿ ಹರಿಯುತ್ತದೆ. ಈ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸುತ್ತದೆ.
ಶಿವನ ಸಮುದ್ರ ಕಾವೇರಿ ನದಿ ಸುಮಾರು 419 ಅಡಿ ಎತ್ತರದಿಂದ ಕಂದಕಕ್ಕೆ ಧುಮುಕುತ್ತದೆ. ಬಂಡೆಯ ಮೇಲಿಂದ ಭೋರ್ಗರೆಯುವ ಕಾವೇರಿಯ ಸೊಬಗನ್ನು ಹಿನ್ನೆಲೆಯಾಗಿರಿಸಿಕೊಂಡು ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.