ಮಂಡ್ಯ: ಇನ್ನು ಮುಂದೆ ಸಕ್ಕರೆ ನಾಡು ಮಂಡ್ಯದಲ್ಲಿ ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ದುರ್ಬಲವಾಗಿರುವ ಮಂಡ್ಯದಲ್ಲಿ ಬಿಜೆಪಿಯನ್ನು ಕಟ್ಟಬೇಕು ಎಂದುಕೊಂಡಿದ್ದೇನೆ. ಪಕ್ಷ ಕಟ್ಟಲು ನನಗೆ ಬಲಿಷ್ಠ ನಾಯಕರ ಅವಶ್ಯಕತೆಯಿದೆ. ಹಲವು ವರ್ಷಗಳಿಂದ ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳನ್ನು ಪಕ್ಷ ಸಿ ವರ್ಗದಲ್ಲಿ ಇರಿಸಿದೆ. ಇದು ಈ ಕ್ಷೇತ್ರಗಳಲ್ಲಿ ಪಕ್ಷ ದುರ್ಬಲವಾಗಿರುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೇವೆ ಸಲ್ಲಿಸಿದ್ದೇನೆ. ಈಗ ಬಿಜೆಪಿ ಪಕ್ಷವನ್ನು ಕಟ್ಟಬೇಕು ಎಂದುಕೊಂಡಿದ್ದೇನೆ ಎಂದರು.
ಇನ್ನು ಸುಮಲತಾ ಅಂಬರೀಷ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಭಾರೀ ಬಹುಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಬಳಿಕ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದು, ಬಿಜೆಪಿ ನಾಯಕರಿಗೆ ಭಾರೀ ಸಂತಸ ಉಂಟು ಮಾಡಿದೆ.





