ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿರುವುದರಿಂದ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಹ ಭೀತಿ ಎದುರಾಗಿದೆ.
ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದಿಂದ 40 ಸಾವಿರ ಕ್ಯೂಸೆಕ್ಸ್‌ಗೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿದೆ. ಪರಿಣಾಮ ಕಾವೇರಿ ನದಿ ಪಾತ್ರದಲ್ಲಿ ಭಾರೀ ಪ್ರವಾಹದ ಆತಂಕ ಎದುರಾಗಿದ್ದು, ಜನತೆ ಸುರಕ್ಷತೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಇನ್ನು ಕೆಆರ್‌ಎಸ್ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರ ಬಿಟ್ಟಿರುವುದರಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ವಿಶ್ವಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಹದ ಆತಂಕ ಎದುರಾಗಿದೆ.
ಕೆಆರ್‌ಎಸ್ ಜಲಾಶಯದಿಂದ ಮತ್ತಷ್ಟು ಹೊರಹರಿವು ಹೆಚ್ಚಾದರೆ ರಂಗನತಿಟ್ಟು ಪಕ್ಷಿಧಾಮದ ವಾಕಿಂಗ್ ಪಾಥ್‌ಗೂ ನೀರು ನುಗ್ಗುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಪಕ್ಷಿಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ವಿಚಾರ ತಿಳಿಯದೇ ಇಂದು ರಂಗನತಿಟ್ಟು ಪಕ್ಷಿಧಾಮಕ್ಕೆ ಆಗಮಿಸಿದ್ದ ಜನರನ್ನು ಅಧಿಕಾರಿಗಳು ಗೇಟ್ ಬಳಿಯೇ ವಾಪಸ್ ಕಳುಹಿಸುತ್ತಿದ್ದು, ಖುಷಿಯಿಂದ ಹೋದ ಪ್ರವಾಸಿಗರಿಗೆ ಭಾರೀ ನಿರಾಸೆಯಾಗಿದೆ.
ಇನ್ನೂ ಕೆಆರ್‌ಎಸ್ ಜಲಾಶಯದಿಂದ ಹೊರಹರಿವು ಕಡಿಮೆಯಾದರಷ್ಟೇ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವೇಶವಿದ್ದು, ಅಲ್ಲಿಯ ತನಕ ಪ್ರವಾಸಿಗರು ಪಕ್ಷಿಧಾಮ ನೋಡಲು ಹೋಗದಂತೆ ಮನವಿ ಮಾಡಲಾಗಿದೆ.





