ಮಂಡ್ಯ: ೭೦ ವರ್ಷದ ವೃದ್ದೆಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮೂರು ವರ್ಷದ ಬಳಿಕ ಜಿಲ್ಲೆಯಲ್ಲಿ ಮೊದಲ ಕೋವಿಡ್-೧೯ ಪ್ರಕರಣ ಇದಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ವೃದ್ದೆಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಕೆಮ್ಮು, ಜ್ವರ ಮತ್ತು ಶೀತ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಶುಕ್ರವಾರ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ದಾಖಲಾಗಿದ್ದರು. ಸೋಂಕಿನ ಗುಣಲಕ್ಷಣ ಕಂಡುಬಂದ ಕಾರಣ ಗಂಟಲಿನ ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ಖಚಿತವಾಗಿದೆ.
ವೃದ್ದೆಯನ್ನು ಮಿಮ್ಸ್‌ನಲ್ಲಿ ತೆರೆದಿರುವ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ. ಮೋಹನ್ ತಿಳಿಸಿದ್ದಾರೆ.



