ಮಂಡ್ಯ: ದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದಾಗಿ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಬೂದಿಯಾಗುತ್ತಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿಯಿರುವ ಶಿಂಷಾ ಅರಣ್ಯ ಪ್ರದೇಶದಲ್ಲಿ ಜರುಗಿದೆ.
ಶಿಂಷಾ ಅರಣ್ಯಕ್ಕೆ ಸೇರಿದ ಸೊಪ್ಪಿನ ಗುಡ್ಡೆ ಪ್ರದೇಶದಲ್ಲಿ ಸಂಜೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಈ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಅಪಾರ ಪ್ರಮಾಣದ ಮರಗಿಡಗಳು ಬಹು ಉಪಯೋಗಿ ಸಸ್ಯ ಸಂಕುಲ ಆಹುತಿಯಾಗಿದೆ. ಜೊತೆಗೆ ಈ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಪ್ರಾಣಿಗಳು ಹಾಗೂ ಅನೇಕ ಜಾತಿಯ ಪಕ್ಷಿಗಳು ಮೃತಪಟ್ಟಿವೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಪ್ರಾಣಿಪ್ರಿಯರು ಕಾಡಿಗೆ ಬೆಂಕಿ ಹಚ್ಚಿರುವ ಆರೋಪಿಗಳು ಹುಡುಕಿ ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.





