ಮಳವಳ್ಳಿ: ಕಾಡು ಪ್ರಾಣಿಗಳನ್ನು ಬೇಟೆಯಾಡುವ ಉದ್ದೇಶದಿಂದ ಜಮೀನಿನಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಸಿಡಿಮದ್ದು ಸಿಡಿದು ಇಲಾತಿ ಹಸು ತೀವ್ರವಾಗಿ ಗಾಯಗೊಂಡು, ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ತಾಲ್ಲೂಕಿನ ಹಲಗೂರು-ಮುತ್ತತ್ತಿ ಮಾರ್ಗದ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಮೀನಿನಲ್ಲಿ ಹಸುವನ್ನು ಮೇಯಲು ಬಿಡಲಾಗಿದ್ದ ಸಂದರ್ಭದಲ್ಲಿ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರವಾಗಿದೆ. ಬ್ಯಾಡರಹಳ್ಳಿ ಗ್ರಾಮದ ಚೌಡೇಗೌಡ ಎಂಬವರ ಮಗ ಶಿವರಾಮ್ ಅವರ ಜಮೀನಿನಲ್ಲಿ ಅಪರಿಚಿತರು ಕಾಡುಪ್ರಾಣಿಗಳನ್ನು ಬೇಟೆಯಾಡಲು ಮೂರು ಕಡೆ ಸಿಡಿಮದ್ದನ್ನು ಇರಿಸಿದ್ದರು. ಹಸು ಮೇವು ಮೇಯಲು ಹೋದ ಸಂದರ್ಭದಲ್ಲಿ ಸಿಡಿಮದ್ದು ಸಿಡಿದು ತೀವ್ರಗಾಯಗೊಂಡಿದೆ.
ತಕ್ಷಣ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ವೃತ್ತ ನಿರೀಕ್ಷಕ ಶ್ರೀಧರ್, ಸಬ್‌ಇನ್‌ಸ್ಪೆಕ್ಟರ್ ಲೋಕೇಶ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಡಿವೈಎಸ್ಪಿ, ಶ್ವಾನದಳ ಹಾಗೂ ಬಾಂಬ್ ಪರಿಶೀಲನೆ ತಂಡ ಭೇಟಿ ನೀಡಿ ಸ್ಥಳ ಪರಿಶೀಲಿಸುತ್ತಿರುವಾಗ ಮತ್ತೆ ಎರಡು ಕಡೆ ಇರಿಸಲಾಗಿದ್ದ ಸಿಡಿಮದ್ದು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಯಗೊಂಡ ಹಸುವಿನ ಜಮೀನಿನ ಮಾಲೀಕ ಶಿವರಾಮ್ ಮಾತನಾಡಿ, ನಾವು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಎಂದಿನಂತೆ ಹಸುಗಳನ್ನು ಮೇಯಿಸಲು ಜಮೀನಿಗೆ ಹೋದಾಗ ಸುಮಾರು 60 ರಿಂದ 70 ಸಾವಿರ ರೂ. ಬೆಲೆ ಬಾಳುವ ಹಸು ಸಿಡಿಮದ್ದಿನಿಂದ ತೀವ್ರ ಗಾಯಗೊಂಡಿದೆ. ಅದು ಮೇವು ಮೇಯಲೂ ಆಗುತ್ತಿಲ್ಲ. ಸಂಬಂಧಪಟ್ಟ ಅಽಕಾರಿಗಳು ಸೂಕ್ತ ಪರಿಹಾರ ಕೊಡಿಸಿ ಕೊಡಬೇಕೆಂದು ಮನವಿ ಮಾಡಿದರು.
ಹಲಗೂರು ಠಾಣೆ ಸಬ್‌ಇನ್‌ಸ್ಪೆಕ್ಟರ್ ಲೋಕೇಶ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.





