ಮಂಡ್ಯ : ಮಾದಕ ವಸ್ತುಗಳ ಸೇವನೆ ದೇಶದ ಅಭಿವೃದ್ಧಿಗೆ ಎದುರಾಗಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಅರಿತುಕೊಂಡು ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಹೇಳಿದರು.
ನಗರದ ಮಿಮ್ಸ್ ಸಭಾಂಗಣದಲ್ಲಿ ಜಿಲ್ಲಾ ಪೋಲಿಸ್ ಇಲಾಖೆಯ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ‘ನಶಾ ಮುಕ್ತ ಭಾರತ ಅಭಿಯಾನ-೨೦೨೫’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮೆಲ್ಲರ ಮೇಲಿರುವ ಅತಿ ದೊಡ್ಡ ಸಾಮಾಜಿಕ ಜವಾಬ್ದಾರಿ ಎಂದರೆ ಮಾದಕ ವಸ್ತುಗಳನ್ನು ಯುವ ಜನತೆ ಸೇವನೆ ಮಾಡದಂತೆ ನೋಡಿಕೊಳ್ಳುವುದು ಹಾಗೂ ಮಾದಕ ವ್ಯಸನಿಗಳನ್ನು ಸರಿ ದಾರಿಗೆ ತರುವುದಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣ ಡ್ರಗ್ ಅಡಿಕ್ಷನ್. ನಮ್ಮಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ಪರಿಶೀಲಿಸಿ ನೋಡಿದರೆ ಬಹುಪಾಲು ಅಪರಾಧ ಕೃತ್ಯಗಳು ಮಾದಕ ವ್ಯಸನದಿಂದ ಉಂಟಾಗಿರುವುದು ಕಂಡು ಬರುತ್ತದೆ. ಪೊಲೀಸ್ ಇಲಾಖೆಯ ಜತೆಗೂಡಿ ಸಾರ್ವಜನಿಕರು ಸಮಾಜವನ್ನು ಮಾದಕ ವಸ್ತುಗಳಿಂದ ಮುಕ್ತ ಮಾಡುವ ಹೊಣೆಗಾರಿಕೆ ನಮ್ಮೆಲ್ಲರದ್ದು ಎಂದರು.
ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಕಾಲೇಜು, ಕುಟುಂಬ, ಸುತ್ತಮುತ್ತಲಿನಲ್ಲಿ ದುಶ್ಚಟಗಳಿಗೆ ಬಲಿಯಾದವರ ಮನಃಪರಿವರ್ತನೆ ಹಾಗೂ ಸುಧಾರಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಮನುಷ್ಯನ ಜೀವನ ಅತ್ಯಂತ ಪವಿತ್ರವಾದದ್ದು, ಜೀವನವನ್ನು ಕ್ಷಣಿಕ ಸುಖಕ್ಕೆ ಬಲಿ ಕೊಡಬೇಡಿ ಎಂದು ತಿಳಿ ಹೇಳಿದರು.
ಒಳ್ಳೆಯ ಸಂಸ್ಕಾರ, ಒಳ್ಳೆಯ ಆಚಾರ ವಿಚಾರಗಳನ್ನು ಕಲಿಯಬೇಕು. ಉತ್ತಮ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು, ನೈತಿಕ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಾದಕ ವಸ್ತುಗಳಿಂದ ದೂರವಿದ್ದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಆಸ್ತಿಯಾಗಬೇಕು ಎಂದು ಅರಿವು ಮೂಡಿಸಿದರು.
ಜಿಲ್ಲಾ ಪೊಲೀಸ್ ಅಧಿಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ದೇಶದ ಯುವ ಜನತೆ, ಕಾರ್ಮಿಕರು ಹೆಚ್ಚಾಗಿ ದುಶ್ಚಟಗಳಿಗೆ ದಾಸರಾಗಿ ತಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ದುಶ್ಚಟಗಳಿಗೆ ದಾಸರಾಗಿರುವವರನ್ನು ದುಶ್ಚಟಗಳಿಂದ ಮುಕ್ತವಾಗಿಸಲು, ರಕ್ಷಿಸಲು ಹಾಗೂ ಅವರನ್ನು ಸರಿದಾರಿಗೆ ತರಲು ಕೇಂದ್ರ ಸರ್ಕಾರ ೨೦೨೦ರಿಂದ ನಶಾಮುಕ್ತ ಭಾರತ ಅಭಿಯಾನವನ್ನು ಪ್ರಾರಂಭಿಸಿತು ಎಂದು ಹೇಳಿದರು.
ಇದರ ಮೂಲ ಉದ್ದೇಶ ಉನ್ನತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜುಗಳ ಮಕ್ಕಳಿಗೆ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ತಿಳವಳಿಕೆ ನೀಡುವುದಾಗಿದೆ. ಈಗಾಗಲೇ ನಾರ್ಕೋಟಿಕ್ ಬ್ಯೂರೋ ದೇಶದಾದ್ಯಂತ ಮಾದಕ ವ್ಯಸನಿಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಅವರು ಸಭಾಂಗಣದಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ ಮಾದಕ ವ್ಯಸನಗಳಿಂದ ದೂರವಿರಬೇಕು ಎಂದು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಮಿಮ್ಸ್ ನಿರ್ದೇಶಕ ಡಾ. ನರಸಿಂಹಸ್ವಾಮಿ, ಅಪರ ಪೊಲೀಸ್ ಅಧಿಕ್ಷಕ ಗಂಗಾಧರಸ್ವಾಮಿ, ಪ್ರಾಂಶುಪಾಲ ಡಾ. ಹನುಮಂತ ಪ್ರಸಾದ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶಾಧಿಕಾರಿ ತಿಮ್ಮರಾಜು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಭಾಗವಹಿಸಿದ್ದರು.



