Mysore
20
overcast clouds
Light
Dark

ಬರ ಪರಿಹಾರ ಹಣ; ಸಾಲದ ಖಾತೆಗೆ ಜಮೆ ಮಾಡದಂತೆ ಬ್ಯಾಂಕ್‌ಗಳಿಗೆ ಸೂಚನೆ

ಮಂಡ್ಯ:  ರೈತರಿಗೆ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ಬ್ಯಾಂಕ್ ಅಧಿಕಾರಿಗಳು ರೈತರ ಯಾವುದೇ ಸಾಲಕ್ಕೆ ಹೊಂದಾಣಿಕೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಸೂಚಿಸಿದರು.

ಇಂದು(ಮೇ.೨೭) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ರೈತರು ತೀವ್ರ ಬರದಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಬ್ಯಾಂಕುಗಳು ರೈತರ ಬರ ಪರಿಹಾರ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡದಂತೆ ಸೂಕ್ತ ನಿರ್ದೇಶನ ನೀಡಲಾಗಿದೆ. ಒಂದು ವೇಳೆ ಸಾಲಕ್ಕೆ ಹೊಂದಣಿಕೆ ಮಾಡಿಕೊಂಡಿದ್ದರೆ ಅದನ್ನು ರೈತರ ಖಾತೆಗೆ ಹಿಂದಿರುಗಿಸಿ, ಈ ಬಗ್ಗೆ ದೂರು ಬರದಂತೆ ನೋಡಿಕೊಳ್ಳಿ, ಒಂದು ವೇಳೆ ಸಾಲದ ಖಾತೆಗ ಜಮೆ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಳೆದ ಸಾಲಿನಲ್ಲಿ ಪ್ರಾಣಿ ದಾಳಿಯಿಂದ ಉಂಟಾದ ಬೆಳೆ ನಷ್ಟ ಕುರಿತಂತೆ 568 ಪ್ರಕರಣಗಳು ವರದಿಯಾಗಿದೆ. ಇವುಗಳಿಗೆ ಪಾವತಿಯಾಗಿರುವ ಪರಿಹಾರ ಕುರಿತಂತೆ ವರದಿ ನೀಡುವಂತೆ  ಸಂಬಂಧಪಟ್ಟ ಅಧಿಕಾರಿಗಳಿಗೆ  ತಿಳಿಸಿದರು.

ಮಳೆ, ಗಾಳಿಯಿಂದ ಮರದ ಕೊಂಬೆಗಳು ವಿದ್ಯುತ್ ಸಂಪರ್ಕದ ಲೈನ್ ಮೇಲೆ ಬೀಳುತ್ತಿದ್ದು, ವಿದ್ಯುತ್ ಅಡಚಣೆ ಉಂಟಾಗುತ್ತಿದೆ ಎಂದು ದೂರುಗಳು ಬರುತ್ತಿವೆ. ತೊಂದರೆ ಉಂಟು ಮಾಡುವ ಮರದ ಕೊಂಬೆಗಳನ್ನು ತೆರವುಗೊಳಿಸಿ. ಮಳೆ, ಗಾಳಿಯಿಂದ ವಿದ್ಯುತ್ ಕಂಬಗಳು ಬಿದ್ದಲ್ಲಿ ಅದಷ್ಟು ಬೇಗ 24 ಗಂಟೆಯೊಳಗಾಗಿ ಸರಿಪಡಿಸಿ ಎಂದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಉಪ ವಿಭಾಗಾಧಿಕಾರಿ ಮಹೇಶ್, , ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್, ಅರಣ್ಯ ಇಲಾಖೆಯ ಅಧಿಕಾರಿ ಶಿಲ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ ಸುರೇಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.