Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಎನ್ ಡಿ.ಆರ್.ಎಫ್ ನಿಯಮದಂತೆ ಬರ ಪರಿಹಾರ; ಡಾ: ಕುಮಾರ

ಮಂಡ್ಯ:  ಎನ್. ಡಿ.ಆರ್ ಎಫ್ ನಿಯಮದಂತೆ ಬರ ಪರಿಹಾರ ನೀಡಲು ಭತ್ತ, ರಾಗಿ, ಜೋಳ ಮತ್ತು ನೆಲಗಡಲೆ 4 ಬೆಳೆಗಳು ನಿಗಧಿಯಾಗಿದ್ದು, ರೈತರ ಮನವಿಯಂತೆ ಕಬ್ಬು ಹಾಗೂ ತೆಂಗು ಬೆಳೆಯನ್ನು ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ತಿಳಿಸಿದರು.

ಇಂದು(ಮೇ.29) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರೈತರ ಕುಂದು ಕೊರತೆಗಳು ಕುರಿತಂತೆ ಸಭೆ ನಡೆಸಿ ಮಾತನಾಡಿದ ಅವರು,  ಕೆ.ಆರ್.ಎಸ್ ನಿಂದ ಬೆಳೆಗಳಿಗೆ ನೀರು ಬಿಡುಗಡೆ ಮಾಡಲು ನೀರಾವರಿ ಸಲಹಾ ಸಮಿತಿ  ಸಭೆ ನಡೆಸಿ ರೈತರಿಗೆ ತಿಳಿಸಿಯೇ ನೀರು ಬಿಡುಗಡೆ ಮಾಡಲಾಗುವುದು. ನೀರು ಬಿಡುಗಡೆಯ ಸಂದರ್ಭದಲ್ಲಿ ವಿ.ಸಿ.ನಾಲೆ ಆಧುನೀಕರಣ ಅಥವಾ ಯಾವುದೇ ಕಾಮಗಾರಿಗಳಿದ್ದಲ್ಲಿ ನಿಲುಗಡೆ ಮಾಡಿ ನೀರು ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ರೈತರಿಗೆ ಆತಂಕ ಬೇಡ ಎಂದರು.

55000 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು;  ಜಿಲ್ಲೆಗೆ 90000 ಮೆಟ್ರಿಕ್ ಟನ್ ರಸಗೊಬ್ಬರ ಬೇಕಿದ್ದು, 55000 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇರುತ್ತದೆ. ಬೇಡಿಕೆ ಅನುಸಾರ ಉಳಿದ ರಸಗೊಬ್ಬರ ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 540 ಪರವಾನಗಿ ಹೊಂದಿರುವ ರಸಗೊಬ್ಬರ ಮಾರಾಟಗಾರರಿದ್ದು, ಅವರಿಗೆ ರಸಗೊಬ್ಬರಗಳ ದರ ಹಾಗೂ ದಾಸ್ತಾನು ವಿವರವನ್ನು ಅನಾವರಣಗೊಳಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

17800 ಪೌತಿ ಖಾತೆ ಕಳೆದ ಸಾಲಿನಲ್ಲಿ ಸರ್ವೆ ನಡೆಸಿದ ಸಂದರ್ಭದಲ್ಲಿ ಮೃತ ರೈತರ ಹೆಸರಿನಲ್ಲೇ ಭೂಮಿ ಇದ್ದದ್ದು, ಕಂಡು ಬಂದ ಹಿನ್ನಲೆ 22,000 ಪ್ರಕರಣಗಳನ್ನು ಪತ್ತೆ ಮಾಡಿ ಪೌತಿ ಖಾತೆ ಆಂದೋಲನ ನಡೆಸಿ ಸುಮಾರು 17800 ಪೌತಿ ಖಾತೆ ಮಾಡಲಾಗಿದೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಇದ್ದ 11800 ಪ್ರಕರಣಗಳಲ್ಲಿ 9700 ಪ್ರಕರಣ ವಿಲೇವಾರಿ ಮಾಡಲಾಗಿದೆ. ಕಂದಾಯ ಇಲಾಖೆ ಹಂತ ಹಂತವಾಗಿ ರೈತರ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ ಎಂದರು.

ಜೂನ್ 8 ರಂದು ಕುಂದು ಕೊರತೆ ಸಭೆ ಚೆಸ್ಕಾಂಗೆ ಸಂಬಂಧಿಸಿದಂತೆ ಹಲವಾರು ರೈತರಿಂದ ದೂರು ಬಂದ ಹಿನ್ನಲೆಯಲ್ಲಿ ಜೂನ್ 8 ರಂದು ರೈತರ ಕುಂದು ಕೊರತೆ ಸಭೆ ನಡೆಸುವಂತೆ ಚೆಸ್ಕಾಂ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಅವರಿಗೆ ತಿಳಿಸಿದರು.

ರೈತರ ಕಾರ್ಯಾಗಾರ ನಡೆಸಿ ಕೃಷಿ, ತೋಟಗಾರಿಕೆ ಇಲಾಖೆಯಿಂದ ದೊರಕುವ ಸೌಲಭ್ಯ, ಸವಲತ್ತು, ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಕಾರ್ಯಾಗಾರ ನಡೆಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ತಿಳಿಸಿದರು‌.

ತಾಲ್ಲೂಕು ಮಟ್ಟದಲ್ಲಿ ಸಭೆ ; ಜಿಲ್ಲೆಯ ತಾಲ್ಲೂಕು ಮಟ್ಟದಲ್ಲಿ ರೈತರ ಕುಂದು ಕೊರತೆ ಸಭೆ ನಡೆಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಎರಡು ತಾಲ್ಲೂಕಿನಲ್ಲಿ ಮಾತ್ರ ಸಭೆ ನಡೆಸಿದ್ದು, ಉಳಿದ ತಾಲ್ಲೂಕಿನಲ್ಲೂ ಸಭೆ ನಡೆಸಲು ತಿಳಿಸಲಾಗುವುದು.

ಕಲ್ಯಾಣಿಗಳ ಅಭಿವೃದ್ಧಿ ಗಳಿಗೆ ಕ್ರಮ ಜಿಲ್ಲಾ ಪಂಚಾಯತ್ ವತಿಯಿಂದ ಈಗಾಗಲೇ 80 ಕಲ್ಯಾಣಿ ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಲ್ಯಾಣಿಗಳ ಅಭಿವೃದ್ಧಿಗಳಿಸಲು ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್  ತಿಳಿಸಿದರು.

ಹೂಳು ತಗೆಯುವ ಕೆಲಸದ ಮೇಲುಸ್ತುವಾರಿ ವಹಿಸಿ ರೈತರು ಕೆರೆಗಳಿಂದ ಹೂಳು ತೆಗೆಯಲು ಅನುಮತಿ ನೀಡಿದ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ರೈತರು ವೈಜ್ಞಾನಿಕವಾಗಿ ಹೂಳು ತೆಗೆಯುವಂತೆ ಮೇಲುಸ್ತುವಾರಿ ವಹಿಸಬೇಕು ಎಂದರು.

ಪೌತಿ ಖಾತೆಗೆ ನಾಡ ಕಚೇರಿಗೆ ಹೋಗಿ ಆನ್ ಲೈನ್ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ತಮ್ಮ ಕೆಲಸ ಆಗುತ್ತದೆ. ಯಾವುದೇ ಗ್ರಾಮ ಲೆಕ್ಕ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗಬೇಡಿ ಎಂದು ಅಪರ ಜಿಲ್ಲಾಧಿಕಾರಿ ಡಾ: ಹೆಚ್. ಎಲ್ ನಾಗರಾಜು  ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಅಶೋಕ ಮಾತನಾಡಿ, ಜಿಲ್ಲೆಯಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ. ರೈತರ ಬೇಡಿಕೆ ಅನುಗುಣವಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಹಸಿರೆಲೆ ಗೊಬ್ಬರದ ಬೀಜಗಳ ಬೇಡಿಕೆ ಹೆಚ್ಚಿದ್ದು, ಎರಡು ದಿನಗಳಲ್ಲಿ 1800 ಕ್ವಿಂಟಾಲ್ ಜಿಲ್ಲೆಗೆ ದಾಸ್ತಾನು ಆಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಮಹೇಶ್, ಕಾವೇರಿ ನೀರಾವರಿ ನಿಗಮ ನಿಯಮಿತದ ಅಧೀಕ್ಷಕ ಇಂಜಿನಿಯರ್ ರಘುರಾಂ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags: