ಮಂಡ್ಯ : ಇತ್ತೀಚೆಗೆ ಹಲವು ಇಲಾಖಾ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಸರ್ಕಾರ ಆದೇಶ ಹೊರಡಿಸಿದ್ದು, ಅದರಲ್ಲಿ ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಡಾ. ಕೆ. ಮೋಹನ್ ಅವರನ್ನು ಮೈಸೂರು ಜಿಲ್ಲಾ ಅಬಕಾರಿ ಉಪ ಆಯುಕ್ತರ (Deputy Commissioner of Excise) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಸದ್ಯ ಇದು ವಿವಾದಕ್ಕೆ ಕಾರಣವಾಗಿದ್ದು, ಆರೋಗ್ಯ ಅಧಿಕಾರಿಯನ್ನು ಅಬಕಾರಿಗೆ ವರ್ಗಾವಣೆ ಮಾಡಿದ್ದು ಏತಕ್ಕೆ? ಸರ್ಕಾರ ಹಳಿ ತಪ್ಪಿರುವುದರಿಂದ ಇದೆಲ್ಲಾ ಆಗಿದೆ ಎಂದು ವಿಪಕ್ಷಗಳು ಸರ್ಕಾರದ ವಿರುದ್ಧಿ ಕಿಡಿಕಾರಿವೆ. ಸರ್ಕಾರಿ ಅಧಿಕಾರಿಗಳ ನಿಯಮ ಪ್ರಕಾರ ಮೂಲ ಇಲಾಖೆಯಿಂದ ಬೇರೆ ಇಲಾಖೆ ವರ್ಗಾಯಿಸುವಂತಿಲ್ಲ. ಅದರಲ್ಲೂ ಆರೋಗ್ಯ ಅಧಿಕಾರಿಯನ್ನು ಅಬಕಾರಿ ಅಧಿಕಾರಿಯನ್ನಾಗಿ ನೇಮಿಸುವುದು ಸಾಧ್ಯವಿಲ್ಲ. ವರ್ಗಾವಣೆ ಪತ್ರದ ಟಿಪ್ಪಣಿಯಲ್ಲಿ ಖುದ್ದು ಸಿಎಂ ಸಹಿ ಇದೆ. ಇದೆಲ್ಲಾ ಹೇಗೆ ಸಾಧ್ಯ? ಸರ್ಕಾರದಲ್ಲಿ ಯಾರ ಹಸ್ತಕ್ಷೇಪ ಇದೆ ಎಂದೆಲ್ಲಾ ವಿಪಕ್ಷಗಳು ಪ್ರಶ್ನಿಸಿವೆ.
ಡಾ.ಕೆ.ಮೋಹನ್ ಅವರು ಮಂಡ್ಯ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಇಲಾಖೆಯನ್ನು ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಮೈಸೂರು ಜಿಲ್ಲಾ ಅಬಕಾರಿ ಉಪ ಆಯುಕ್ತ ಆರ್. ನಾಗಶಯನ ಅವರನ್ನು ಲಂಚ ಆರೋಪದ ಮೇಲೆ ಸರ್ಕಾರ ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ, ಈ ಹುದ್ದೆಗೆ ಹೊಸ ಅಧಿಕಾರಿಯನ್ನು ನಿಯೋಜಿಸುವ ಸಲುವಾಗಿ ಡಾ. ಮೋಹನ್ ಅವರನ್ನು ಆರೋಗ್ಯ ಇಲಾಖೆಯಿಂದ ವರ್ಗಾವಣೆ ಆಗಿದೆ.
ಅನ್ಯ ಇಲಾಖೆಗೆ ವರ್ಗಾವಣೆ ಇಲ್ಲ ; ಆರೋಗ್ಯ ಸಚಿವರ ಸ್ಪಷ್ಟನೆ
ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಲು ಆಗುವುದಿಲ್ಲ. ಏತಕ್ಕೆ ಹೀಗೆ ಆಗಿದೆ ಎಂದು ಮಾಹಿತಿ ಪಡೆದು ವಿವರ ನೀಡಲಿದ್ದಾನೆ ಎಂದು ತಿಳಿಸಿದ್ದಾರೆ.





