ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಶ್ವಾನಗಳ ಓಟದ ಸ್ಪರ್ಧೆ ನಡೆದಿದ್ದು, ಜನರಂತೂ ಭಾರೀ ಆಸಕ್ತಿಯಿಂದ ಮುಗಿಬಿದ್ದು ವೀಕ್ಷಿಸಿದರು.
ಇಷ್ಟು ದಿನ ದೂರದ ದುಬೈನಂತಹ ದೇಶದಲ್ಲಿ ನಾಯಿಗಳ ಓಟದ ಸ್ಪರ್ಧೆಯನ್ನು ನಾವು ನೋಡಿದ್ವಿ. ಆದರೆ ಈಗ ನಮ್ಮ ದೇಶದಲ್ಲೇ ಮೊದಲ ಬಾರಿಗೆ ನಾಯಿಗಳ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಓಡುತ್ತಿದ್ದ ನಾಯಿಗಳ ಓಟ ಕಂಡು ನೆರೆದಿದ್ದವರು ಫುಲ್ ಎಂಜಾಯ್ ಮಾಡಿದರು.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಜಾಗಿನಕೆರೆ ಗ್ರಾಮದಲ್ಲಿ ಯುವಕರ ತಂಡವೊಂದು ಶ್ವಾನಗಳ ಓಟದ ಸ್ಪರ್ಧೆಯನ್ನು ಆಯೋಜಿಸಿತ್ತು. ಹೀಗಾಗಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸುಮಾರು 50ಕ್ಕೂ ಹೆಚ್ಚು ಶ್ವಾನಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು.
ಇನ್ನು ಈ ಯುವಕರು ಹಲವು ದಿನಗಳಿದ ಶ್ವಾನಗಳ ಸ್ಪರ್ಧೆ ನಡೆಸಲು ಚಿಂತನೆ ನಡೆಸಿದ್ದರು. ಹೀಗಾಗಿ ರೇಸ್‌ಗಾಗಿ ಇರುವ ಶ್ವಾನಗಳನ್ನು ತಂದು ಓಟದ ಸ್ಪರ್ಧೆಗೆ ಶ್ವಾನಗಳನ್ನು ಸಜ್ಜುಗೊಳಿಸಿದ್ದರು. ಗ್ರಾಮದ ಹೊರವಲಯದಲ್ಲಿ ನಡೆದ ಈ ಓಟದ ಸ್ಪರ್ಧೆಯಲ್ಲಿ ಶ್ವಾನಗಳು ನಾ ಮುಂದು, ತಾ ಮುಂದು ಎಂದು ಓಡಿದವು. ಇದು ನೆರೆದಿದ್ದ ಜನರ ಮೈ ರೋಮಾಂಚನಗೊಳಿಸಿತು.