ಮಂಡ್ಯ : ಜಿಲ್ಲಾಧಿಕಾರಿ ಡಾ: ಕುಮಾರ ಅವರು ಶುಕ್ರವಾರ ಶ್ರೀರಂಗಪಟ್ಟಣ ತಾಲ್ಲೂಕು ಕಛೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಸ್ವೀಕೃತ ಅಹವಾಲುಗಳನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ತಹಶೀಲ್ದಾರ್ ಗೆ ತಿಳಿಸಿದರು. ಕಛೇರಿಯ ಟಪಾಲು ವಿಭಾಗದಲ್ಲಿ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕಛೇರಿಯಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಇ-ಆಫೀಸ್ ಮೂಲಕವೇ ನಿರ್ವಹಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಕಚೇರಿಯಲ್ಲಿ ಒಟ್ಟು 118 ಅರ್ಜಿಗಳು ಬಾಕಿಯಿದ್ದು ಅವುಗಳಲ್ಲಿ 42 ಅರ್ಜಿಗಳು 30 ದಿನಗಳ ಮೇಲ್ಪಟ್ಟವುಗಳಾಗಿರುತ್ತವೆ. 30 ದಿನಗಳ ಮೇಲ್ಪಟ್ಟ ಅರ್ಜಿಗಳನ್ನು ಸಂಬಂಧಪಟ್ಟ ವಿಷಯ ನಿರ್ವಾಹಕರಿಗೆ ನೀಡುವಂತೆ ಹಾಗೂ ಕಡತಗಳು ನಿಗದಿತ ಸಮಯದಲ್ಲಿ ವಿಲೇವಾರಿಯಾಗುವಲ್ಲಿ ಕ್ರಮವಹಿಸುವಂತೆ ಕಛೇರಿಯ ತಹಸಿಲ್ದಾರ್ ರವರಿಗೆ ಹಾಗೂ ಸಂಬಂಧಿಸಿದ ಶಿರಸ್ತೇದಾರ್ ರವರಿಗೆ ಸೂಚನೆ ನೀಡಿದರು.
ಅಭಿಲೇಖಾಲಯ ಶಾಖೆಗೆ ಭೇಟಿ ನೀಡಿ ಏಪ್ರಿಲ್ ನಿಂದ ಈ ದಿನಾಂಕದವರೆಗೆ ಅಭಿಲೇಖಾಲಯ ಶಾಖೆಗೆ 814 ಅರ್ಜಿಗಳು ದಾಖಲಾತಿ ಕೋರಿ ಸ್ವೀಕೃತವಾಗಿದ್ದು, ಇವುಗಳಲ್ಲಿ 480 ಅರ್ಜಿಗಳನ್ನು ಮಾತ್ರವೇ ಆನ್ ಲೈನ್ ತಂತ್ರಾಂಶದ ಮೂಲಕ ಕ್ರಮವಹಿಸಲಾಗಿದ್ದು, ಉಳಿಕೆ 330 ಅರ್ಜಿಗಳನ್ನು ಭೌತಿಕವಾಗಿ ಕ್ರಮವಹಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಇನ್ನು ಮುಂದೆ ಅರ್ಜಿಗಳನ್ನೂ ಆನ್ ಲೈನ್ ಮೂಲಕವೇ ನಿರ್ವಹಿಸಬೇಕು ಸ್ಕ್ಯಾನ್ ಮಾಡಿದ ಕಡತಗಳನ್ನು ವ್ಯವಸ್ಥಿತವಾಗಿಡಲು ಕಛೇರಿಯ ಸಿಬ್ಬಂದಿಗಳಿಗೆ ತಿಳಿಸಿದರು.
ನ್ಯಾಯಾಲಯ ಪ್ರಕರಣಗಳಿಗೆ ವಿಶೇಷ ಆದ್ಯತೆ ನೀಡಿ ತುರ್ತಾಗಿ ಕ್ರಮವಹಿಸಬೇಕು. ಬಾಕಿಯಿರುವ 17 ರಿಟ್ ಪಿಟಿಷನ್ ಪ್ರಕರಣಗಳ ಬಾಬ್ತು ಶೀಘ್ರವೇ ಮಾನ್ಯ ನ್ಯಾಯಾಲಯಕ್ಕೆ ಕಂಡಿಕೆವಾರು ಉತ್ತರವನ್ನು ಸಲ್ಲಿಸಬೇಕು KPLC ಪ್ರಕರಣಗಳಿಗೆ ಸಂಬಂಧಿಸಿದಂತೆ ನೆನಪೋಲೆಗಳಿಗೆ ಆಸ್ಪದ ನೀಡದಂತೆ, ಪ್ರಕರಣಗಳನ್ನು ಇತ್ಯರ್ಥ ಪಡಿಡುವಂತೆ ಸೂಚಿಸಿದರು. ಕಛೇರಿಯ ಎಲ್ಲಾ ಶಾಖೆಗಳಿಗೂ ಭೇಟಿ ನೀಡಿ ಅರ್ಜಿ ಹಾಗೂ ಕಡತಗಳನ್ನು ಇ-ಆಫೀಸ್ ನಲ್ಲಿಯೇ ನಿಗದಿತ ಕಾಲಮಿತಿಯೊಳಗೆ ಮಂಡಿಸಿ ಇತ್ಯರ್ಥಪಡಿಸುವಲ್ಲಿ ಕ್ರಮವಹಿಸುವಂತೆ ನೌಕರರಿಗೆ ಸೂಚಿಸಿದರು.
ನಂತರ, ಶ್ರೀರಂಗಪಟ್ಟಣ ತಾಲ್ಲೂಕಿನ ಉಪ ನೋಂದಣಾಧಿಕಾರಿ ಕಛೇರಿಗೆ ಭೇಟಿ ನೀಡಿ, ಸ್ವೀಕೃತವಾದ ಅರ್ಜಿಗಳಿಗೆ ನಿಯಮಿತ ಕಾಲಾವಧಿಯಲ್ಲಿ, ಸಾರ್ವಜನಿಕರನ್ನು ಪದೇ ಪದೇ ಕಛೇರಿಗೆ ಅಲೆಯದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಉಪ ನೋಂದಣಾಧಿಕಾರಿಗೆ ಸೂಚನೆ ನೀಡಿದರು. ಸಾರ್ವಜನಿಕರ ಅನಗತ್ಯ ಅಲೆದಾಟಕ್ಕೆ ಆಸ್ಪದ ನೀಡದೇ, ತುರ್ತಾಗಿ ಅರ್ಜಿಗಳ ವಿಲೇವಾರಿಯಲ್ಲಿ ಕ್ರಮವಹಿಸುವಂತೆ ಕಛೇರಿಯ ಅಧಿಕಾರಿ/ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು. ಪರಿಶೀಲನೆ ವೇಳೆ ಶ್ರೀರಂಗಪಟ್ಟಣ ತಹಶೀಲ್ದಾರ್ ಹಾಗೂ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.





