ಮಂಡ್ಯ: ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿಪಡಿಸಬೇಕು, ದುಬಾರಿ ಕಟಾವು ಮತ್ತು ಸಾಗಾಣಿಕೆ ವೆಚ್ಚದ ಮೇಲೆ ನಿಯಂತ್ರಣಕ್ಕಾಗಿ ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು, ಸಕ್ಕರೆ ಇಳುವರಿ ತಿಳಿಸುವುದು ಮತ್ತು ತೂಕದಲ್ಲಿ ನಡೆಯುವ ಮೋಸ ತಡೆಗಟ್ಟಬೇಕೆಂದು ಘೋಷಣೆ ಕೂಗಿದರು.
ದೇಶದಲ್ಲಿ ಸುಮಾರು ಐದು ಕೋಟಿ ರೈತರು ಕಬ್ಬು ಬೆಳೆಯುತ್ತಾರೆ. ಕರ್ನಾಟಕ ಕಬ್ಬು ಬೆಳೆಯುವುದರಲ್ಲಿ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಕರ್ನಾಟಕದಲ್ಲಿ ಮಂಡ್ಯ ಜಿಲ್ಲೆ ಅತಿ ಹೆಚ್ಚು ಕಬ್ಬು ಬೆಳೆಯುವ ಮೂಲಕ ಸಕ್ಕರೆ ನಾಡು ಎಂಬ ಕೀರ್ತಿಗೆ ಪಾತ್ರವಾಗಿದೆ. ಜೊತೆಗೆ ಮಂಡಿಯುದ್ದ ಕಬ್ಬು, ಎದೆ ಉದ್ದ ಸಾಲ ಎಂಬ ಅಪಕೀರ್ತಿಯನ್ನು ನಮ್ಮ ರೈತರು ಪಡೆದುಕೊಂಡಿದ್ದಾರೆ. ಇವರ ನೆರವಿಗೆ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು.
ಆಯುಕ್ತರು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರು ಮಾರ್ಗದರ್ಶನದಂತೆ ಟನ್ ಕಬ್ಬಿಗೆ ಕಟಾವು ವೆಚ್ಚ ಮತ್ತು ಸಾಗಾಣಿಕೆ ವೆಚ್ಚವನ್ನು ಪ್ರಾರಂಭದಿಂದ ಕೊನೆವರೆಗೂ ಒಂದೇ ರೀತಿಯಲ್ಲಿ ಇರಬೇಕು. ಇದರ ಉಸ್ತುವಾರಿಯನ್ನು ಆಡಳಿತ ಮಂಡಳಿಯವರು ನೋಡಿಕೊಳ್ಳಬೇಕು. ಸಕ್ಕರೆ ಆಡಳಿತ ಮಂಡಳಿಯವರು ಹಾಗೂ ಕಬ್ಬು ಬೆಳೆಗಾರರ ಮುಖಂಡರ ಸಭೆಯನ್ನು ಜಿಲ್ಲಾಧಿಕಾರಿ ಅವರು ಕಾರ್ಖಾನೆ ಆರಂಭಕ್ಕೂ ಮುನ್ನ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್ ಮಾತನಾಡಿ, ಕಬ್ಬು ಸರಬರಾಜು ಮಾಡಲು ಮತ್ತು ಕೊಳ್ಳಲು ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಯುವ ರೈತರ ನಡುವೆ ದ್ವಿಪಕ್ಷೀಯ ಒಡಂಬಡಿಕೆ ಪತ್ರಕ್ಕೆ ಇಬ್ಬರೂ ಸಹಿ ಹಾಕಬೇಕು ಎಂದು ಆಗ್ರಹಿಸಿದರು.
ಸಂಘದ ಕುಳ್ಳೇಗೌಡ, ಸತೀಶ್, ರಘುನಾಥ್, ನಾಗೇಂದ್ರ, ಶ್ರೀನಿವಾಸ್, ಲಿಂಗರಾಜಮೂರ್ತಿ, ಸಿದ್ದೇಗೌಡ, ವಿಶ್ವನಾಥ್, ಗುರುಸ್ವಾಮಿ, ಮುತ್ತುರಾಜ್, ನಂಜುಂಡಸ್ವಾಮಿ, ಚಿಕ್ಕರಾಚಯ್ಯ, ಕೆ.ಎನ್.ಮೂರ್ತಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





